ಐಪಿಎಲ್ ಗೆ ಕೊರೊನಾ ಕಾಟ, ದಕ್ಷಿಣ ಆಫ್ರಿಕಾ ಇಲ್ಲವೆ ಶ್ರೀಲಂಕಾದಲ್ಲಿ ನಡೆಸಲು ಬಿಸಿಸಿಐ ಚಿಂತನೆ

ನವದೆಹಲಿ, ಜ.13- ಇಂಡಿಯನ್ ಪ್ರಿಮೀಯರ್ ಲೀಗ್ ನ 15ನೇ‌ ಆವೃತ್ತಿಗೆ ಕೊರೊನಾ ಕರಿ ನೆರಳು ಆವರಿಸಿದೆ. ಈ‌‌ ಹಿನ್ನೆಲೆಯಲ್ಲಿ ಶ್ರೀಲಂಕಾ ಅಥವಾ‌‌ ದಕ್ಷಿಣ ಆಫ್ರಿಕಾದಲ್ಲಿ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ.
ಭಾರತದಲ್ಲಿ ಕೋವಿಡ್ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದೆ. ಇದರಿಂದಾಗಿ ಸ್ವದೇಶದಲ್ಲಿ ಐಪಿಎಲ್ ಟೂರ್ನಿ ನಡೆಯುವುದು ಅನುಮಾನವಾಗಿದೆ. ಏಪ್ರಿಲ್ ತಿಂಗಳಷ್ಟರಲ್ಲಿ ಸೋಂಕು ಪರಿಸ್ಥಿತಿ ಸುಧಾರಿಸದಿದ್ದರೆ ಬಿಸಿಸಿಐ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದೆ.
ಈಗ ಭಾರತ ಕ್ರಿಕೆಟ್ ಸರಣಿ ಆಡುತ್ತಿರುವ ದಕ್ಷಿಣ ಆಫ್ರಿ
ಕಾದಲ್ಲಿ ಐಪಿಎಲ್ ಆಯೋಜಿಸುವುದು ಬಿಸಿಸಿಐ ಬಳಿ ಇರುವ ಪ್ಲಾನ್ ಎ. ಸದ್ಯ ಭಾರತದ ಜೊತೆಗಿನ ಕ್ರಿಕೆಟ್ ಸರಣಿಯನ್ನು ದಕ್ಷಿಣ ಆಫ್ರಿಕಾ ಅಚ್ಚುಕಟ್ಟಾಗಿ ಆಯೋಜಿಸಿರುವುದು ಬಿಸಿಸಿಐ ಗಮನ ಸೆಳೆದಿದೆ.
ಭಾರತದಲ್ಲಿ ಐಪಿಎಲ್ ನಡೆಸಲು ಸಾಧ್ಯವಾಗದೇ ಹೋದ ಪಕ್ಷದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಸಲು ಮೊದಲು ಆದ್ಯತೆ ಕೊಡಲು ಬಿಸಿಸಿಐ ನಿರ್ಧರಿಸಿದೆ. ಒಂದು ದಕ್ಷಿಣ
ಆಫ್ರಿಕಾದಲ್ಲಿ ಕಾರಣಾಂತರದಿಂದ ಐಪಿಎಲ್ ನಡೆಸಲು ಸಾಧ್ಯವಾಗದಿದ್ದರೆ ಶ್ರೀಲಂಕಾದಲ್ಲಿ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ.
ನಾವು ಯಾವಾಗಲೂ ಯುಎಇ ಮೇಲೆಯೇ ಅವಲಂಬಿತವಾಗಿರಲು ಸಾಧ್ಯವಿಲ್ಲ. ಹೀಗಾಗಿ, ಬೇರೆ ಆಯ್ಕೆಗಳನ್ನ ಅವಲೋಕಿಸಲು ನಿರ್ಧರಿಸಿದೆವು. ಸೌತ್ ಆಫ್ರಿಕಾದ ಸಮಯಕ್ಕೆ ಹೊಂದಿಕೊಳ್ಳುವುದು ಆಟಗಾರರಿಗೂ ಸುಲಭ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿರುವುದನ್ನು ಉಲ್ಲೇಖಿಸಿ ಆಂಗ್ಲ ದೈನಿಕವೊಂದು ವರದಿ ಮಾಡಿದೆ.