ಐಪಿಎಲ್ ಕೊಹ್ಲಿ-ರಾಹುಲ್ ಮುಖಾಮುಖಿ


ಅಹಮದಾಬಾದ್,ಏ.೩೦- ಐಪಿಎಲ್‌ನಲ್ಲಿಂದು ಆರ್‌ಸಿಬಿ ಮತ್ತು ಪಂಜಾಬ್‌ಕಿಂಗ್ಸ್ ಸೆಣಸಲಿದೆ. ಕೊಹ್ಲಿ ನೇತೃತ್ವದ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ೬ ಪಂದ್ಯಗಳ ಪೈಕಿ ಒಂದು ಪಂದ್ಯದಲ್ಲಿ ಮಾತ್ರ ಸೋತಿದ್ದು, ಜಯದ ನಾಗಾಲೋಟ ಮುಂದುವರೆಸುವ ಹುಮ್ಮಸ್ಸಿನಲ್ಲಿದೆ.
ಚೆನ್ನೈ ವಿರುದ್ಧ ಮಾತ್ರ ಆರ್‌ಸಿಬಿ ಹೀನಾಯ ಸೋಲನುಭವಿಸಿತ್ತು. ಇದನ್ನೊರತುಪಡಿಸಿ ಉಳಿದೆಲ್ಲ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಆರ್‌ಸಿಬಿ ಪರ ದೇವದತ್ತ ಪಡಿಕಲ್ ಹಾಗೂ ವಿರಾಟ್‌ಕೊಹ್ಲಿ ಉತ್ತಮ ಆಟ ಪ್ರದರ್ಶಿಸುತ್ತಿದ್ದು, ಇಂದಿನ ಪಂದ್ಯದಲ್ಲಿ ಸಂಘಟಿತ ಹೋರಾಟದ ಮೂಲಕ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ.
ಮ್ಯಾಕ್ಸ್‌ವೆಲ್, ಎಬಿ ಡಿವಿಲಿಯರ್‍ಸ್ ಉತ್ತಮ ಆಟ ಪ್ರದರ್ಶಿಸಿ ಉತ್ತಮ ಮೊತ್ತ ಕಲೆ ಹಾಕಬೇಕಾದ ಒತ್ತಡಕ್ಕೆ ಸಿಲುಕಿದೆ. ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ವಿಫಲರಾಗುತ್ತಿರುವುದು ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.
ಇತ್ತ ಪಂಜಾಬ್ ತಂಡವು ೬ ಪಂದ್ಯಗಳಲ್ಲಿ ೨ ಪಂದ್ಯಗಳನ್ನು ಗೆದ್ದು ಒತ್ತಡಕ್ಕೆ ಸಿಲುಕಿದೆ. ರಾಹುಲ್ ಪಡೆಗೆ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿ ಮತ್ತೆ ಪುಟಿದೇಳುವ ತವಕದಲ್ಲಿದೆ.
ಮಯಾಂಕ್, ರಾಹುಲ್, ಗೇಲ್, ಹೂಡಾ ಅವರ ಬ್ಯಾಟಿಂಗ್‌ನ್ನು ಬಲವಾಗಿ ನೆಚ್ಚಿಕೊಂಡಿದೆ. ಆದರೆ, ಅಗರ್‌ವಾಲ್ ನಿರೀಕ್ಷತ ಮಟ್ಟದಲ್ಲಿ ಆಟವಾಡುತ್ತಿಲ್ಲ. ನಾಯಕ ರಾಹುಲ್ ಕೂಡ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿಯ ಐಪಿಎಲ್‌ನಲ್ಲಿ ಸ್ಥಿರ ಬ್ಯಾಟಿಂಗ್ ಮಾಡಲು ಎಡವುತ್ತಿದ್ದಾರೆ.
ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಬ್ಯಾಟಿಂಗ್‌ಗೆ ಅನುಕೂಲಕರವಾಗಿದೆ. ಮೊದಲು ಬ್ಯಾಟ್ ಮಾಡುವ ತಂಡ ೨೦೦ರ ಆಸುಪಾಸಿನತ್ತ ರನ್ ಬಾರಿಸುವ ಸಾಧ್ಯತೆ ಇದೆ. ಆದ್ದರಿಂದ ಟಾಸ್ ನಿರ್ಣಾಯಕ ಪಾತ್ರವಹಿಸಲಿದ್ದು, ಗೆಲುವು ಯಾರಿಗೆ ಎಂಬುದು ಕುತೂಹಲ ಕೆರಳಿಸಿದೆ.