ಐಪಿಎಲ್‌ ಟೂರ್ನಿಯಿಂದ ಮಿಚೆಲ್‌ ಮಾರ್ಷ್‌ ಔಟ್‌

ನವದೆಹಲಿ, ಸೆ 22 -ರಾಯಲ್‌ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಪಾದದ ಗಾಯಕ್ಕೆ ತುತ್ತಾಗಿರುವ ಆಸ್ಟ್ರೇಲಿಯನ್ ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌, ಪ್ರಸಕ್ತ ಆವೃತ್ತಿಯ ಐಪಿಎಲ್‌ ಇನ್ನುಳಿದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಮೂಲಗಳು ತಿಳಿಸಿವೆ.

ಸೋಮವಾರ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ನಾಯಕ ಡೇವಿಡ್ ವಾರ್ನರ್‌, ಐದನೇ ಓವರ್‌ ಅನ್ನು ಮಿಚೆಲ್‌ ಮಾರ್ಷ್‌ಗೆ ನೀಡಿದ್ದರು. ಅದರಂತೆ ಆಲ್‌ರೌಂಡರ್‌ ಬೌಲಿಂಗ್‌ ಮಾಡುವ ವೇಳೆ ಪಿಚ್‌ ಮೇಲೆ ಜಾರಿ ನೆಲಕ್ಕೆ ಉರುಳಿದರು. ಇವರು ಕೇವಲ ನಾಲ್ಕು ಎಸೆತಗಳನ್ನು ಮಾತ್ರ ಹಾಕಲು ಶಕ್ತರಾಗಿದ್ದರು. ಇನ್ನುಳಿದ ಎರಡು ಎಸೆತಗಳನ್ನು ವಿಜಯ್‌ ಶಂಕರ್ ಮಾಡಿದ್ದರು.

ಪಂದ್ಯವೀಡಿ ಪೆವಿಲಿಯನ್‌ನಲ್ಲಿ ಸಮಯ ಕಳೆದ ಮಾರ್ಷ್‌, 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದರು. ಆದರೆ, ಅವರು ಕ್ರಿಸ್‌ ಬಳಿ ನಿಲ್ಲಲು ತುಂಬಾ ಕಷ್ಟಪಟ್ಟರು. ಒಂದೇ ಎಸೆತದಲ್ಲಿ ಕ್ಯಾಚ್ ನೀಡಿದರು. ಅಂತಿಮವಾಗಿ ಸನ್‌ ರೈಸರ್ಸ್ ಹೈದರಾಬಾದ್ ತಂಡ 10 ರನ್‌ಗಳಿಂದ ಸೋಲು ಅನುಭವಿಸಿತು.

ಮಿಚೆಲ್‌ ಮಾರ್ಷ್‌ ಅವರ ಗಾಯ ಗಂಭೀರ ಎಂದು ಕಾಣುತ್ತಿದೆ. ಮುಂದೆ ಅವರು ಯಾವುದೇ ಪಂದ್ಯವನ್ನು ಆಡಲಿದ್ದಾರೆಂಬ ಬಗ್ಗೆ ನನಗೆ ಖಾತ್ರಿಯಿಲ್ಲ,” ಎಂದು ತಂಡದ ಮೂಲಗಳು ಪಿಟಿಐಗೆ ತಿಳಿಸಿದೆ. ಆದರೆ, ತಂಡ ಅಧಿಕೃತವಾಗಿ ಈ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಂದು ವೇಳೆ ಮಾರ್ಷ್ ಟೂರ್ನಿಯಿಂದ ಹೊರ ನಡೆದರೆ, ಹೈದರಾಬಾದ್‌ ಫ್ರಾಂಚೈಸಿಗೆ ತುಂಬಾ ನಷ್ಟವಾಗಲಿದೆ.

ಇದು ಸ್ಪಷ್ಟವಾದರೆ, 37ರ ಪ್ರಾಯದ ಡಾನ್‌ ಕ್ರಿಸ್ಟಿಯನ್‌ ಅವರನ್ನು ಹೈದರಾಬಾದ್‌ ಫ್ರಾಂಚೈಸಿ ಪರಿಗಣಿಸಲಿದೆ. ಅವರು ಈ ಹಿಂದೆ 40 ಐಪಿಎಲ್‌ ಪಂದ್ಯಗಳಾಡಿರುವ ಅನುಭವವನ್ನು ಹೊಂದಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡುವ ಅವರು, ಬಲಗೈ ಸೀಮರ್‌ ಆಗಿದ್ದಾರೆ.

ವಿಶ್ವದ ನಂ.1 ಟಿ20 ಆಲ್‌ರೌಂಡರ್‌ ಮೊಹಮ್ಮದ್‌ ನಬಿ ಅಂತಿಮ 11ಕ್ಕೆ ಆಗಮಿಸುವ ಸಾಧ್ಯತೆ ಇದೆ. ನೋವು ಇದ್ದರೂ ಮಿಚೆಲ್‌ ಮಾರ್ಷ್‌ ಕ್ರೀಸ್‌ಗೆ ಬ್ಯಾಟಿಂಗ್‌ ಮಾಡಲು ಬಂದಿದ್ದಕ್ಕೆ ಡೇವಿಡ್‌ ವಾರ್ನರ್‌ ಶ್ಲಾಘಿಸಿದರು. “ಅವರು ನೋಡಲು ಸರಿಯಾಗಿ ಇರಲಿಲ್ಲ. ಆದರೂ ಅವರು ತಮ್ಮ ಕೈಯಿಂದ ಸಾಧ್ಯವಾದಷ್ಟು ಉತ್ತಮವಾದದನ್ನು ನೀಡಲು ಪ್ರಯತ್ನ ನಡೆಸಿದರು. ಆದರೆ, ಅನಿರೀಕ್ಷಿತವಾಗಿ ಎಲ್ಲವೂ ನಡೆದು ಹೋಯಿತು,” ಎಂದು ಸ್ಟಾರ್‌ ಸ್ಪೋರ್ಟ್ಸ್‌ಗೆ ವಾರ್ನರ್‌ ತಿಳಿಸಿದರು.