ಐನಾಪುರ ಸೇರಿ ಹಲವರು ಕಾಂಗ್ರೆಸ್‌ಗೆ ಸೇರ್ಪಡೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯರವರ ಸಮ್ಮುಖದಲ್ಲಿ ಬಿಜೆಪಿಯ ಮಾಜಿ ಶಾಸಕ ನಂಜುಂಡಸ್ವಾಮಿ, ಐನಾಪುರ್, ಪುರುಷೋತ್ತಮ್‌ರವರು ಇಂದು ಕೆಪಿಸಿಸಿ ಕಛೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಕಾರ್ಯಾಧ್ಯಕ್ಷರುಗಳಾದ ಆರ್. ಧೃವನಾರಾಯಣ್, ಸಲೀಂ ಅಹ್ಮದ್ ಇದ್ದಾರೆ.

ಬೆಂಗಳೂರು,ಮಾ.೭:ಇಬ್ಬರು ಮಾಜಿ ಶಾಸಕರು ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಬಿಜೆಪಿಯಲ್ಲಿದ್ದ ವಿಜಯಪುರದ ಮಾಜಿ ಶಾಸಕರಾದ ಮನೋಹರ ಐನಾಪುರ ಮತ್ತು ಕೊಳ್ಳೆಗಾಲದ ನಂಜುಂಡಸ್ವಾಮಿ ಅವರು ಇಂದು ಕಾಂಗ್ರೆಸ್‌ಗೆ ಸೇರ್ಪಡೆಯಾದರು.ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕರುಗಳಾದ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್ ಸಮ್ಮುಖದಲ್ಲಿ ಇವರುಗಳು ಕಾಂಗ್ರೆಸ್‌ಗೆ ಸೇರಿದ್ದು, ಇವರ ಜತೆ ಮೈಸೂರಿನ ಮಾಜಿ ಮೇಯರ್ ಪುರುಷೋತ್ತಮ್ ಸಹ ಕಾಂಗ್ರೆಸ್‌ಗೆ ಸೇರಿದರು.ದಲಿತರು ಬಿಜೆಪಿ ಕಡೆ ನೋಡಬೇಡಿ ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ದಲಿತರು, ಬಿಜೆಪಿಯ ಕಡೆ ತಿರುಗಿ ನೋಡಬಾರದು, ಬಿಜೆಪಿ ಅವರು ಮನುವಾದಿಗಳು ಹಾಗೂ ಪುರೋಹಿತ ಶಾಹಿಗಳು ದೇಶಕ್ಕೆ ಶಾಪ ಎಂದು ಸ್ವಾಮಿ ವಿವೇಕಾನಂದ ಹೇಳಿದ್ದಾರೆ ಎಂದರು.
ದಲಿತರು, ತಳಸಮುದಾಯದವರು ಬಿಜೆಪಿ ಕಡೆ ನೋಡುವುದು ಬೇಡ, ಬಿಜೆಪಿ ಶ್ರೀಮಂತ ವರ್ಗದವರ ಪಕ್ಷ, ತಳ ಸಮುದಾಯಗಳ ಶ್ರೇಯೋಭಿವೃದ್ಧಿ ಬೇಕಿಲ್ಲ, ಸಂವಿಧಾನದ ಬಗ್ಗೆ ಗೌರವ ಇಲ್ಲ, ಹಿಂದುತ್ವದ ಮೇಲೆ ಅಧಿಕಾರಕ್ಕೆ ಬಂದು ಹಣ ಮಾಡಲು ಹೊರಟಿದ್ದಾರೆ ಎಂದು ದೂರಿದರು.ಲೋಕಾಯುಕ್ತವನ್ನು ನಾನು ಮುಚ್ಚುವ ಕೆಲಸ ಮಾಡಿಲ್ಲ. ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ನಡೆದ ಕಾರಣ ಎಸಿಬಿ ರಚನೆ ಮಾಡಿದ್ದೆವು. ಭ್ರಷ್ಟಾಚಾರ ರಕ್ಷಣೆಗೆ ಎಸಿಬಿ ರಚನೆ ಎಂದು ಬಿಜೆಪಿಯವರು ತಪ್ಪು ಮಾಹಿತಿ ಕೊಡುತ್ತಿದ್ದಾರೆ. ಕನಿಷ್ಠ ಕಾನೂನು ಜ್ಞಾನ ಇದ್ದವರು ಹೀಗೆ ಮಾತನಾಡಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.
ಭ್ರಷ್ಟಾಚಾರಕ್ಕೆ ದಾಖಲೆ ಕೊಡಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಕೇಳುತ್ತಾರೆ. ಈಗ ಯಡಿಯೂರಪ್ಪ ಆಪ್ತ ವಿರೂಪಾಕ್ಷಪ್ಪ ಮಾಡಾಳ್ ಪುತ್ರ ಲಂಚದ ಜತೆ ಸಿಕ್ಕಿಬಿದ್ದಿರಲ್ಲ, ಇನ್ನೇನು ದಾಖಲೆ ಬೇಕು. ನೈತಿಕತೆ ಇದ್ದರೆ ಮುಖ್ಯಮಂತಿ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಡಿಕೆಶಿ ಹೇಳಿಕೆ
ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬಿಜೆಪಿಯವರು ತರಾತುರಿಯಲ್ಲಿ ಚುನಾವಣೆ ನಡೆಸಲು ಮುಂದಾಗಿದ್ದರು. ಕಳೆದ ಫೆ. ೨೮ ಲಾಸ್ಟ್ ವರ್ಕಿಂಗ್ ಡೇ ಎಂದು ಅಧಿಕಾರಿಗಳಿಗೆ ಮಾಹಿತಿ ಬಂದಿತ್ತು. ಆದರೆ, ಈಗ ಚುನಾವಣೆ ಮುಂದಕ್ಕೆ ಹಾಕಿದ್ದಾರೆ. ಎಷ್ಟು ದಿನ ಅವಕಾಶ ಸಿಗುತ್ತೋ ಅಷ್ಟು ದಿನ ಬಳಸಿಕೊಂಡು ದುಡ್ಡು ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.ಬೇಗ ಚುನಾವಣೆ ಮಾಡಿ ಬ್ರಹ್ಮಾಂಡ ಭ್ರಷ್ಟಾಚಾರವನ್ನು ತಡೆಯಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿ, ಯಾವಾಗ ಚುನಾವಣೆ ನಡೆದರೂ ನಾವು ಸಿದ್ಧ ಎಂದರು.
ಕಾಂಗ್ರೆಸ್ ಪಕ್ಷ ನೀಡಿರುವ ಭರವಸೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂಬ ಮುಖ್ಯಮಂತ್ರಿಗಳ ಹೇಳಿಕೆಗೆ ಕಿಡಿಕಾರಿದ ಅವರು, ನಾವು ೨೦೦ ಯುನಿಟ್ ವಿದ್ಯುತ್ ಉಚಿತ. ೨ ಸಾವಿರ ರೂ. ಗ್ಯಾರಂಟಿ, ೧೦ ಕೆಜಿ ಅಕ್ಕಿ ಕೊಡುವುದು ನಿಶ್ಚಿತ ಇದು ನಮ್ಮ ಭರವಸೆ ಮಾಡಿಯೇ ತೀರುತ್ತೇವೆ ಎಂದರು.