ಐದು ಹಂತಗಳಲ್ಲಿ ಅನ್‌ಲಾಕ್

ಬೆಂಗಳೂರು,ಜೂ.೯- ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಇಳಿಕೆಯಾಗುತ್ತಿರುವುದರಿಂದ ಅನ್‌ಲಾಕ್ ಮಾಡುವ ಬಗ್ಗೆ ಚರ್ಚೆಗಳು ನಡೆದಿವೆ. ಐದು ಹಂತಗಳಲ್ಲಿ ಅನ್‌ಲಾಕ್‌ಗೆ ಯೋಜನೆ ರೂಪಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗಿರುವ ಜಿಲ್ಲೆಗಳಲ್ಲಿ ಅನ್‌ಲಾಕ್ ಮಾಡುವ ಸಂಬಂಧ ನಿನ್ನೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಏಕಾಏಕಿ ಲಾಕ್‌ಡೌನ್ ತೆರವು ಮಾಡದೆ ಹಂತ ಹಂತವಾಗಿ ಅನ್‌ಲಾಕ್ ಮಾಡಲಾಗುವುದು ಎಂದು ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಲಾಕ್‌ಡೌನ್‌ನನ್ನು ಏಕಾಏಕಿ ತೆರವು ಮಾಡಿದರೆ ಸೋಂಕು ಹೆಚ್ಚಳವಾಗುವ ಸಾಧ್ಯತೆ ಇದೆ. ಹಾಗಾಗಿ, ೫ ಹಂತಗಳಲ್ಲಿ ಅನ್‌ಲಾಕ್‌ಗೆ ಚಿಂತೆನೆ ನಡೆದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ತಿಂಗಳ ೧೨ ರಂದು ತಜ್ಞರ ಜತೆ ಸಭೆ ನಡೆಸಿ ಅನ್‌ಲಾಕ್ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದರು.
ಅಗತ್ಯ ವಸ್ತುಗಳ ಖರೀದಿ ಅವಧಿ ವಿಸ್ತರಣೆ, ಸೀಮಿತ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ, ಹೋಟೆಲ್, ಬಾರ್, ರೆಸ್ಟೋರೆಂಟ್, ಪಾರ್ಕ್‌ಗಳಲ್ಲಿ ವಾಕಿಂಗ್‌ಗೆ ಅವಕಾಶ ನೀಡುವ ಬಗ್ಗೆ ಚರ್ಚೆಗಳು ನಡೆದಿವೆ. ಅಂತಿಮವಾಗಿ ಮುಖ್ಯಮಂತ್ರಿಗಳೇ ತೀರ್ಮಾನ ಮಾಡುತ್ತಾರೆ ಎಂದರು.
ನಾಳೆ ಸಿಎಂ ಚರ್ಚೆ
ಸೋಂಕು ಕಡಿಮೆ ಇರುವ ಜಿಲ್ಲೆಗಳನ್ನು ಹಂತ ಹಂತವಾಗಿ ಅನ್‌ಲಾಕ್ ಮಾಡುವ ಸಂಬಂಧ ನಾಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಾಳೆ ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಓಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠರ ಜತೆ ವೀಡಿಯೊ ಸಂವಾದ ನಡೆಸಲಿದ್ದು, ನಂತರ ಹಿರಿಯ ಸಚಿವರ ಜತೆಯೂ ಸಭೆ ನಡೆಸಿ ಅನ್‌ಲಾಕ್ ಬಗ್ಗೆ ತೀರ್ಮಾನಗಳನ್ನು ಪ್ರಕಟಿಸುವರು.
ಪಾಸಿಟಿವಿಟಿ ದರ ಶೇ. ೫ಕ್ಕೆ ಬಂದರೆ ಅಂತಹ ಜಿಲ್ಲೆಗಳಲ್ಲಿ ಅನ್‌ಲಾಕ್ ಮಾಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಈ ಹಿಂದೆಯೇ ಹೇಳಿದ್ದು, ಅದರಂತೆ ಪಾಸಿಟಿವಿಟಿ ದರ ಶೇ. ೫ಕ್ಕಿಂತ ಕಡಿಮೆ ಇರುವ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ, ಬೀದರ್, ಯಾದಗಿರಿ, ಕಲಬುರಗಿ, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಗಳು ಅನ್‌ಲಾಕ್ ಆಗಲಿವೆ. ಶೇ. ೧೦ಕ್ಕಿಂತ ಪಾಸಿಟಿವಿಟಿ ದರ ಹೆಚ್ಚಿರುವ ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧಗಳು ಮುಂದುವರೆಯುವ ಸಾಧ್ಯತೆಗಳಿವೆ.
ಸೋಂಕು ಶೇ. ೫ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಅನ್‌ಲಾಕ್ ಆದರೂ ಕೊರೊನಾ ನಿಗ್ರಹ ದೃಷ್ಟಿಯಿಂದ ರಾತ್ರಿ ಕರ್ಫ್ಯೂ ಜಾರಿ ತೀರ್ಮಾನವನ್ನು ಸರ್ಕಾರ ಕೈಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ.
ಮಹಾರಾಷ್ಟ್ರ, ದೆಹಲಿ, ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಂತ ಹಂತವಾಗಿ ಲಾಕ್‌ಡೌನ್ ತೆರವುಗೊಳಿಸಲಾಗುತ್ತಿದ್ದು, ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಲಾಕ್‌ಡೌನ್ ತೆರವುಗೋಳಿಸಿ ಶೇ. ೫ಕ್ಕಿಂತಲೂ ಪಾಸಿಟಿವಿಟಿ ದರ ಕಡಿಮೆ ಇರುವ ಜಿಲ್ಲೆಗಳಲ್ಲಿ ಶೇ. ೫೦ ರಷ್ಟು ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುವ ಸಾಧ್ಯತೆಗಳಿವೆ.
ಪಾಸಿಟಿವಿಟಿ ದರ ಶೇ. ೫ಕ್ಕಿಂತ ಹೆಚ್ಚಾಗಿ ಶೇ. ೧೦ಕ್ಕಿಂತ ಕಡಿಮೆಇರುವ ಕೆಲ ಜಿಲ್ಲೆಗಳಲ್ಲೂ ಸೀಮಿತ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡುವ ಸಾಧ್ಯತೆಯೂ ಇದೆ.

ಯಾವುದಕ್ಕೆಲ್ಲ ವಿನಾಯಿತಿ ಸಾಧ್ಯತೆ

  • ದಿನಸಿ, ತರಕಾರಿ, ಹಣ್ಣು, ಹೂ ಗಳ ಅಂಗಡಿ ದಿನಾ ಪೂರ್ತಿ ತೆರೆಯಲು ಅವಕಾಶ.
  • ಬಟ್ಟೆ, ಆಭರಣ, ಎಲೆಕ್ಟ್ರಿಕ್, ಹಾರ್ಡ್‌ವೇರ್, ನಿರ್ಮಾಣ ಸಾಮಗ್ರಿ, ಮೊಬೈಲ್ ಮಾರಾಟ ಅಂಗಡಿ, ಗ್ಯಾರೇಜ್‌ಗಳಿಗೂ ಅನುಮತಿ.
  • ನಿರ್ಬಂಧಗಳೊಂದಿಗೆ ಬಸ್, ಮೆಟ್ರೊ, ಟ್ಯಾಕ್ಸಿ, ಆಟೋ ಸಂಚಾರಕ್ಕೆ ಅವಕಾಶ.
  • ಹೋಟೆಲ್, ಬಾರ್, ರೆಸ್ಟೋರೆಂಟ್‌ಗಳಿಗೆ ಶೇ. ೫೦ ಗ್ರಾಹಕರ ಮಿತಿಯೊಂದಿಗೆ ಅನುಮತಿ.
  • ಸರ್ಕಾರಿ ಸೇರಿದಂತೆ ಇತರ ಕಚೇರಿಗಳ ಕಾರ್ಯನಿರ್ವಹಣೆಗೂ ಅವಕಾಶ.
  • ಧಾರ್ಮಿಕ ಕೇಂದ್ರಗಳನ್ನು ತೆರಯಲು ಅವಕಾಶ.