ಐದು ವಿಭಿನ್ನ ಕಥೆ ಪೆಂಟಗನ್‍ನಲ್ಲಿ ಅನಾವರಣ

•             ಚಿ.ಗೋ ರಮೇಶ್

ಒಂದೇ ಚಿತ್ರದಲ್ಲಿ ಐದು ವಿಭಿನ್ನ ಕಥೆಗಳನ್ನು ಹೇಳುವ ಸಾಹಸ ಮಾಡಿದ್ದಾರೆ ನಿರ್ದೇಶಕರೂ ಆಗಿರುವ ನಿರ್ಮಾಪಕ ಗುರು ದೇಶಪಾಂಡೆ. ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ಚಿತ್ರವನ್ನು ಐದು ಮಂದಿ ನಿರ್ದೇಶಕರು ಆಕ್ಷನ್ ಕಟ್ ಹೇಳಿರುವುದು ಚಿತ್ರ ವಿಶೇಷ. ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸತನದ ಪ್ರಯತ್ನ.

ಸಾವು ಮತ್ತು ಕಾಗೆ ನಡುವಿನ ಐದಯ ಕತೆಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ನಿರ್ದೇಶಕರಾದ ಆಕಾಶ್ ಶ್ರೀವತ್ಸ, ಚಂದ್ರಮೋಹನ್, ರಾಘು ಶಿವಮೊಗ್ಗ, ಕಿರಣ್ ಕುಮಾರ್ ಹಾಗೂ ಗುರು ದೇಶಪಾಂಡೆ ಐದು ಮಂದಿ ಆಕ್ಷನ್ ಕಟ್ ಹೇಳಿದ್ದಾರೆ.

ಮೈಸೂರು ಪಾಕ್, ಕಾಮಾತುರಾಣಾ ನಭಯಂ, ನಲಜ್ಜ, ದೋಣಿಸಾಗಲಿ, ಮಿಸ್ಟರ್ ಗೋಪಿ ಕೆಫೆ ಸೇರಿ ಐದು ಕಥೆಗಳಿರುವ ಈ ಚಿತ್ರದಲ್ಲಿ ಹಿರಿಯನಟ ಪ್ರಕಾಶ್ ಬೆಳವಾಡಿ, ಪ್ರಮೋದ್ ಶೆಟ್ಟಿ, ಅನುಷಾ ರೈ, ತನಿಶಾ ಕುಪ್ಪಂಡ,ವಂಶಿಕೃಷ್ಣ, ಅಪೂರ್ವ ಮುಂತಾದವರು ಅಭಿನಯಿಸಿದ್ಧಾರೆ.

ಟ್ರೈಲರ್ ಬಿಡುಗಡೆ ಮಾಡಿದ ನಿರ್ದೇಶಕರಾದ ಟಿ.ಎಸ್ ನಾಗಾಭರಣ ಮತ್ತು ಮಹೇಶ್ ಸುಖಧರೆ ಚಿತ್ರಕ್ಕೆ ಮತ್ತು ತಂಡಕ್ಕೆ ಶುಭ ಹಾರೈಸಿದ್ದಾರೆ.

ನಿರ್ಮಾಪಕ ಗುರು ದೇಶಪಾಂಡೆ, ಚಿತ್ರದಲ್ಲಿ ಬರುವ 5 ಸಾವಿನ ಕಥೆಗಳನ್ನು ಮುಂದಿಟ್ಟುಕೊಂಡು ಚಿತ್ರ ಮಾಡಲಾಗಿದೆ. ಐದೂ ಕತೆಗಳ ಕೊನೆಯಲ್ಲಿ ಕಾಗೆಯೊಂದು ಕತೆಗಳಿಗೆ ಲಿಂಕ್ ಮಾಡುತ್ತ ಹೋಗುತ್ತದೆ, ಅಲ್ಲದೆ ಸಾಕಷ್ಟು ಹೊಸ ಪ್ರತಿಭೆಗಳಿಗೆ ಈ ಚಿತ್ರದ ಮೂಲಕ ಅವಕಾಶ ನೀಡಿದ್ದೇವೆ ಎಂದು ಹೇಳಿದರು.

ಗ್ರಾಮೀಣ ಸೊಗಡಿನ ದೋಣಿ ಸಾಗಲಿ ಕಥೆಯಲ್ಲಿ ಕೃತಿಕಾ ದೇಶಪಾಂಡೆ, ರವಿಶಂಕರ್ ಇವರೊಂದಿಗೆ ವಂಶಿ, ಅನುಶಾ ರೈ ಮುಂತಾದವರು ನಟಿಸಿದ್ದಾರೆ. ಕೊರೋನಾ ಸಮಯದಲ್ಲಿ ಹಿರಿಯರಿಗೆ ಹೇಗಲ್ಲಾ  ತೊಂದರೆಯಾಯ್ತು ಎಂಬುದನ್ನು ಮೈಸೂರು ಪಾಕ್‍ನಲ್ಲಿ ನಿರ್ದೇಶಕ ಆಕಾಶ್ ಶ್ರೀವತ್ಸ ಹೇಳಿದ್ದಾರೆ ಹಿರಿಯನಟ ವೈಜನಾಥ್ ಬಿರಾದಾರ್ ಹಾಗೂ ಬಾಲನಟಿ ಆರಾಧ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಡೇಟಿಂಗ್ ಆಪ್, ಸೋಷಿಯಲ್ ಮೀಡಿಯಾ ವಂಚನೆಗಳಿಗೆ ಯುವಜನತೆ ಹೇಗೆ ಬಲಿಯಾಗುತ್ತಿದ್ದಾರೆ ಎಂಬುದನ್ನು ರಾಘು ಶಿವಮೊಗ್ಗ ನಿರ್ದೇಶನದ ಕಾಮಾತುರಾಣಾ ನಭಯಂ, ನಲಜ್ಜ ಚಿತ್ರದಲ್ಲಿ ಹೇಳಲಾಗಿದೆ. ಪ್ರಕಾಶ್ ಬೆಳವಾಡಿ, ತನಿಶಾ ಕುಪ್ಪಂಡ ಪ್ರೇರಣಾ ಕಂಬಂ, ಕಿರಣ್ ನಾಯಕ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಚಂದ್ರಮೋಹನ್ ನಿರ್ದೇಶನದ ಕಾಮಿಡಿ ಥ್ರಿಲ್ಲರ್ ಕಥೆ ಹೊಂದಿದ ಮಿಸ್ಟರ್ ಗೋಪಿಕೆಫೆ ಅಲ್ಲದೆ ಗುರು ದೇಶಪಾಂಡೆ ನಿರ್ದೇಶನದ ಚಿತ್ರದಲ್ಲಿ ನಟ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲದೆ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ, ಅಶ್ವಿನಿ, ನಟ ಪೃಥ್ವಿ ಅಂಬರ್ ಮುಂತಾದವರು ಅಭಿನಯಿಸಿದ್ದಾರೆ.