ಐದು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ವಿಳಂಬ: ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು

ಕಾಸರಗೋಡು, ಎ.೩೦- ವಿಧಾನಸಭಾ  ಚುನಾವಣೆಯ ಮತ ಎಣಿಕೆ ಮೇ ಎರಡರಂದು ನಡೆಯಲಿದ್ದು, ಅಂತಿಮ ಫಲಿತಾಂಶ ಘೋಷಣೆ ವಿಳಂಬಗೊಳ್ಳುವ ಸಾಧ್ಯತೆ ಇದೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.

ಜಿಲ್ಲೆಯ ಐದು ಕೆಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಬೆಳಗ್ಗೆ ೮ ಗಂಟೆಗೆ ಮತ ಎಣಿಕೆ ಆರಂಭಗೊಳ್ಳಲಿದ್ದು, ಪ್ರತೀ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಒಂದೊಂದು ಕೇಂದ್ರಗಳಲ್ಲಿ ನಡೆಯಲಿದೆ. ಪೂರ್ಣ ಫಲಿತಾಂಶ ಸಂಜೆ ನಾಲ್ಕು ಗಂಟೆ ವೇಳೆಗೆ ಲಭಿಸಲಿದೆ ಎಂದವರು ಮಾಹಿತಿ ನೀಡಿದ್ದಾರೆ. ಕೋವಿಡ್  ಮಾನದಂಡವನ್ನು ಪಾಲಿಸಿಯೇ ಮತ ಎಣಿಕೆ ನಡೆಯಲಿದೆ. ವಿಜಯೋತ್ಸವ ಹಾಗೂ ಮತಗಟ್ಟೆ ಸುತ್ತ ಜನರು ಗುಂಪುಗೂಡಲು ಅವಕಾಶ ಇಲ್ಲ. ಮತ ಎಣಿಕೆ ಕೇಂದ್ರಕ್ಕೆ ಬರುವ ಏಜಂಟ್ ಗಳು ಕೋವಿಡ್ ನೆಗಟಿವ್ ಸರ್ಟಿಫಿಕೆಟ್ ಹೊಂದಿರಬೇಕು. ಏಜಂಟ್ ಗಳು  ಬೆಳಗ್ಗೆ ೭ ಗಂಟೆಗೆ ಮೊದಲು ಎಣಿಕಾ ಕೇಂದ್ರಕ್ಕೆ ತಲುಪಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮಂಜೇಶ್ವರ  ಕ್ಷೇತ್ರದ ಮತ ಎಣಿಕೆ ೧೭ ಸುತ್ತುಗಳಲ್ಲಿ ನಡೆಯಲಿದೆ. ೩೩೬ ಮತಗಟ್ಟೆಗಳಿದ್ದು, ತಲಾ ೨೦ ಮತಗಟ್ಟೆಗಳ ಮತ ಎಣಿಕೆ ಒಂದು ಸುತ್ತಿನಲ್ಲಿ ನಡೆಯಲಿದೆ. ಅದೇರೀತಿ ಕಾಸರಗೋಡು ೨೯೬ ಮತಗಟ್ಟೆ ೧೫ ಸುತ್ತು, ಉದುಮ ೩೧೬ ಮತಗಟ್ಟೆ ೧೬ ಸುತ್ತು, ಕಾಞಂಗಾಡ್  ೩೩೬ ಮತಗಟ್ಟೆ ೧೭ ಸುತ್ತು, ತ್ರಿಕ್ಕರಿಪುರ ೩೦೭ ಮತಗಟ್ಟೆಗಳಿದ್ದು ೧೬ ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ ಎಂದವರು ತಿಳಿಸಿದರು. ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎಣಿಕೆ ಕುಂಬಳೆ ಸರಕಾರಿ ಹಯರ್ ಸೆಕಂಡರಿ ಶಾಲೆ, ಕಾಸರಗೋಡು ಕ್ಷೇತ್ರದ ಎಣಿಕೆ  ಕಾಸರಗೋಡು ಸರಕಾರಿ ಕಾಲೇಜು, ಉದುಮ  ಕ್ಷೇತ್ರದ ಮತ ಎಣಿಕೆ ಪೆರಿಯ ಪಾಲಿಟೆಕ್ನಿಕ್ ಕಾಲೇಜು, ಕಾಞಂಗಾಡ್ ಕ್ಷೇತ್ರದ ಮತ ಎಣಿಕೆ ಪಡನ್ನಕಾಡ್  ನೆಹರೂ ಕಾಲೇಜು ಹಾಗೂ ತ್ರಿಕ್ಕರಿಪುರ ಕ್ಷೇತ್ರದ ಎಣಿಕೆ ತ್ರಿಕ್ಕರಿಪುರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದೆ.ಮೊದಲು ಅಂಚೆ ಮತಗಳನ್ನು ಎಣಿಕೆ ಮಾಡಲಾಗವುದು. ಮಂಜೇಶ್ವರ ಮತ್ತು ಕಾಸರಗೋಡಿನಲ್ಲಿ ತಲಾ ೨,೫೦೦ , ಉದುಮ ಮತ್ತು ಕಾಞಂಗಾಡ್ ನಲ್ಲಿ ತಲಾ ೪ ಸಾವಿರ ಹಾಗೂ ತ್ರಿಕ್ಕರಿಪುರದಲ್ಲಿ ೭ ಸಾವಿರದಷ್ಟು ಅಂಚೆ ಮತಗಳಿವೆ. ೫೦೦ ಅಂಚೆ ಮತಗಳಿಗೆ ಒಂದು ಟೇಬಲ್ ನಂತೆ ಎಣಿಕೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮತ ಎಣಿಕೆ ದಿನ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಅಗತ್ಯ ಪೊಲೀಸ್ ಬಂದೋ ಬಸ್ತ್  ಏರ್ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.