ಐದು ವರ್ಷ ಪಂಚ ಗ್ಯಾರಂಟಿ

ಸಂಜೆವಾಣಿ ನ್ಯೂಸ್
ಮೈಸೂರು: ಮಾ.16:- ಐದು ವರ್ಷಗಳವರೆಗೆ ಅಧಿಕಾರ ಕೊಟ್ಟಿದ್ದಿರಿ. ನಾವು ಅಧಿಕಾರದಲ್ಲಿರುವ ಅಷ್ಟು ದಿನ ಸಂಪೂರ್ಣವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಕೊಡುತ್ತೇವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಧಿಕಾರಕ್ಕೆ ಬಂದ ಕೂಡಲೇ ಐದು ಗ್ಯಾರೆಂಟಿಗಳನ್ನು ಅನುಷ್ಠಾನಗೊಳಿಸುತ್ತೇವೆ. ಕೊಟ್ಟ ಮಾತಿನಂತೆ ನಡೆಯುತ್ತೇವೆ ಎಂಬ ಭರವಸೆ ನೀಡಲಾಯಿತು.ಅದರಂತೆ ಬಡವರ ಕಲ್ಯಾಣಕ್ಕಾಗಿ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮಾಡಿದ್ಧೇವೆ. ಎಲ್ಲ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಗ್ಯಾರೆಂಟಿ ಯೋಜನೆಗಳ ಫಲಾನುಭವಿಗಳ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಅವರು ಈ ಗ್ಯಾರೆಂಟಿ ಯೋಜನೆಗಳನ್ನು ಘೋಷಣೆ ಮಾಡಿದ ದಿನದಿಂದ ಇದರ ಬಗ್ಗೆ ತಪ್ಪು ಮಾಹಿತಿಯನ್ನು ಜನರಿಗೆ ನೀಡುತ್ತಿದ್ದಾರೆ. ಹೀಗಾಗಿ ಫಲಾನುಭವಿಗಳ ಸಮಾವೇಶ ನಡೆಸಿ ಜನರಿಗೆ ವಸ್ತುಸ್ಥಿತಿ ತಿಳಿಸುವ ಉದ್ದೇಶದಿಂದ ಸರ್ಕಾರದಿಂದಲೇ ಸಮಾವೇಶ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಐದು ಗ್ಯಾರೆಂಟಿಗಳನ್ನು ಚುನಾವಣೆಗೂ ಮೊದಲೇ ನೀಡಲಾಗಿತ್ತು. ಬೆಲೆ ಏರಿಕೆಯಿಂದ ಬಡವರು ಜೀವನ ನಡೆಸಲು ಹಾಗೂ ಬದುಕಲು ಕಷ್ಟವಾಗುತ್ತಿದೆ. ಬಡವರ ಕೈಯಲ್ಲಿ ಹಣವಿಲ್ಲ, ಖರೀದಿ ಮಾಡುವ ಶಕ್ತಿ ಇಲ್ಲದಂತಾಗಿದೆ. ಅವಕಾಶ ವಂಚಿತ ಜನರಿದ್ದಾರೆ, ಅವರಿಗೆ ಆರ್ಥಿಕ ಮತ್ತು ಸಾಮಾಜಿಕವಾಗಿ ಶಕ್ತಿ ತುಂಬುವ ಕಾರಣಕ್ಕೆ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಲು ನಿರ್ಧರಿಸಿದೆವು ಎಂದು ತಿಳಿಸಿದರು.
ಅಧಿಕಾರಕ್ಕೆ ಬಂದ ಕೂಡಲೇ ಐದು ಗ್ಯಾರೆಂಟಿಗಳನ್ನು ಅನುಷ್ಠಾನಗೊಳಿಸುತ್ತೇವೆ. ಕೊಟ್ಟ ಮಾತಿನಂತೆ ನಡೆಯುತ್ತೇವೆ ಎಂಬ ಭರವಸೆ ನೀಡಲಾಯಿತು. ವಿರೋಧ ಪಕ್ಷದವರು ಇದರ ಬಗ್ಗೆ ವ್ಯಂಗ್ಯವಾಡಿದರು. ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ, ಇದಕ್ಕಾಗಿ ಹಣ ತರಲು ಸಾಧ್ಯವಿಲ್ಲ. ಗ್ಯಾರೆಂಟಿ ಯೋಜನೆ ಜಾರಿಗೊಳಿಸಿದರೆ ರಾಜ್ಯದ ಖಜಾನೆ ಖಾಲಿಯಾಗಲಿದ್ದು, ಯಾವುದೇ ಕಾರಣಕ್ಕೂ ಯೋಜನೆಗಳನ್ನು ಜಾರಿಗೊಳಿಸಲು ಆಗಲ್ಲ ಎಂದಿದ್ದರು. ಪ್ರಧಾನಿ ನರೇಂದ್ರಮೋದಿಯವರಯ ರಾಜಸ್ತಾನದಲ್ಲಿ ಭಾಷಣ ಮಾಡುವಾಗ ಕರ್ನಾಟಕದಲ್ಲಿ ಐದು ಗ್ಯಾರಂಟಿ ಯೋಜನೆ ಜಾರಿಗೊಳಿಸಿದರೆ ರಾಜ್ಯದ ಖಜಾನೆ ಖಾಲಿ ಆಗಲಿದೆ ಎಂದರು.
ಆರ್.ಆಶೋಕ, ಬಸವರಾಜ ಬೊಮ್ಮಯಿ, ವಿಜಯೇಂದ್ರ ಸೇರಿ ನರೇಂದ್ರಮೋದಿಯವರು ಹೇಳಿದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚುನಾವಣೆಗೋಸ್ಕರ ಮಾಡಿದ್ದು, ಚುನಾವಣೆ ನಂತರ ಎಲ್ಲವನ್ನೂ ನಿಲ್ಲಿಸುತ್ತಾರೆಂದು ಅಪ್ಪಟ್ಟ ಸುಳ್ಳು ಹೇಳಿಕೊಂಡೆ ಕಾಲ ಕಳೆಯುತ್ತಿದ್ದಾರೆ. ಯೋಜನೆಗಳು ಜಾರಿಯಾದರೆ ಅಭಿವೃದ್ಧಿ ಕೆಲಸಗಳು ಮಾಡಲು ಆಗಲ್ಲ, ಇದು ಕೇವಲ ಚುನಾವಣೆಗೆ ಮಾಡಿರುವ ಕಾರ್ಯಕ್ರಮ, ಚುನಾವಣೆ ಬಳಿಕ ಇದನ್ನು ನಿಲ್ಲಿಸುತ್ತಾರೆ ಎಂದು ಸುಳ್ಳು ಹೇಳಿದ್ದರು.
ಇಂದು ಎಲ್ಲ ಜಾತಿ, ಧರ್ಮದ ಬಡವರಿಗೆ ಈ ಯೋಜನೆಗಳನ್ನು ನೀಡುವ ಕೆಲಸ ಮಾಡುತ್ತಿದ್ದೇವೆ, ಎಲ್ಲರಿಗೂ ಬಡವರಿಗೂ ನೀಡುತ್ತಿದ್ದೇವೆ. ಯಾವುದೇ ಧರ್ಮ, ಜಾತಿ, ಪಂಗಡ ಎಂದು ಭೇದ ಮಾಡುವುದಿಲ್ಲ ಎಂದು ತಿಳಿಸಿದರು.
ಹೀಗಾಗಿ ನಾವು ಅಧಿಕಾರಕ್ಕೆ ಬಂದ ಕೆಲವೇ ದಿನದಲ್ಲಿ ಶಕ್ತಿ ಯೋಜನೆ ಜಾರಿಗೊಳಿಸಿದ್ದು, ಈ ಹಣವನ್ನು ಸಾರಿಗೆ ಕೆಎಸ್‍ಆರ್‍ಟಿಸಿಗೆ ಸರ್ಕಾರ ಕಟ್ಟಿಕೊಟ್ಟಿದೆ. ಸ್ವಾತಂತ್ರ್ಯ ಬಂದಾಗಿನಿಂದ ಈವರೆಗೆ ಯಾವುದೇ ಸರ್ಕಾರ ಇಂತಹ ಕಾರ್ಯಕ್ರಮ ಜಾರಿಗೊಳಿಸಿಲ್ಲ. ಶಕ್ತಿ ಯೋಜನೆಯ ಮೂಲಕ ಧರ್ಮಸ್ಥಳಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ ಎಂದು ವೀರೇಂದ್ರ ಹೆಗಡೆ ಅವರೇ ಖುದ್ದಾಗಿ ಪತ್ರ ಬರೆದಿದ್ದರು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಇದಾದ ನಂತರ ಜುಲೈನಲ್ಲಿ ಅನ್ನಭಾಗ್ಯ ಜಾರಿಗೊಳಿಸಲಾಯಿತು. ಈ ಹಿಂದೆ ಸಿಎಂ ಆಗಿದ್ದಾಗ 7 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತಿತ್ತು. ಬಡವರು ಕೂಡ ಈ ದೇಶದ ಸಂಪತ್ತಿಗೆ ಮಾಲೀಕರಾಗಿದ್ದು, ಕರ್ನಾಟಕವನ್ನು ಹಸಿವು ಮುಕ್ತಗೊಳಿಸಲು ಅದನ್ನು ಜಾರಿಗೆ ತಂದಿದ್ದೆ. ಆದರೆ ಬಿಜೆಪಿ ಅವರು 7 ಕೆಜಿಯನ್ನು 5 ಕೆಜಿಗೆ ಇಳಿಸಲಾಯಿತು. ಬಡವರಿಗೆ ಅಕ್ಕಿ ನೀಡುವ ಸಲುವಾಗಿ ಫುಡ್ ಕಾಪೆರ್Çರೇಷನ್ ಆಫ್ ಇಂಡಿಯಾವನ್ನು ಕೋರಲಾಗಿತ್ತು. ಆದರೆ ಅಕ್ಕಿ ಸಿಗಲಿಲ್ಲ. ಆದರೆ ಅಕ್ಕಿ ಸಿಗುವವರೆಗೂ ಅಕ್ಕಿ ಬದಲಿಗೆ ಅದಕ್ಕೆ ತಗಲುವ ಹಣವನ್ನು ನೀಡುವುದಾಗಿ ತಿಳಿಸಿ, 170 ರೂ.ಗಳನ್ನು ನೀಡಲಾಗುತ್ತಿದೆ ಎಂದರು.
ಗೃಹ ಜ್ಯೋತಿ ಯೋಜನೆಯನ್ನು ಸಹ ಜುಲೈನಲ್ಲಿ ಜಾರಿಗೊಳಿಸಿ, 200 ಯೂನಿಟ್‍ವರೆಗೆ ಯಾರೆಲ್ಲ ವಿದ್ಯುತ್ ಬಳಸುತ್ತಾರೆ ಅವರು ಬಿಲ್ ಕಟ್ಟಬೇಕಿಲ್ಲ ಎಂದು ಘೋಷಣೆ ಮಾಡಲಾಯಿತು. ಇದೇ ಮೈದಾನದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್‍ನಲ್ಲಿ ಚಾಲನೆ ನೀಡಿ, ರಾಜ್ಯದ ಒಟ್ಟು 1.17 ಕೋಟಿ ಕುಟುಂಬಗಳಿಗೆ 2 ಸಾವಿರ ರೂ.ಗಳನ್ನು ಪ್ರತಿ ತಿಂಗಳು ನೀಡಲಾಗುತ್ತಿದ್ದು, ಮುಂದೆ ಸಹ ಕೊಡುತ್ತೇವೆ. ಯುವನಿಧಿ ಯೋಜನೆಯಲ್ಲಿ 5651 ಜನ ನೊಂದಾಯಿತ ಫಲಾನುಭವಿಗಳಿಗೆ ಹಣ ನೀಡಲಾಗುತ್ತಿದೆ. ಈ ನಡುವೆ ಭತ್ಯೆ ಪಡೆಯುತ್ತಿರುವ ಪದವಿ ಹಾಗೂ ಡಿಪೆÇ್ಲಮೊ ಪದವಿ ಹೊಂದಿರುವವರಿಗೆ ಕೌಶಲ ಅಭಿವೃದ್ಧಿ ತರಬೇತಿ ನೀಡುತ್ತೇವೆ ಎಂದು ತಿಳಿಸಿದರು.
ದಲಿತ, ಹಿಂದುಳಿದ, ಅಲ್ಪಸಂಖ್ಯಾತರು ಸಂವಿಧಾನವನ್ನು ಉಳಿಸಿಕೊಳ್ಳಬೇಕು, ಸಂವಿಧಾನ ಉಳಿದರೆ ನಾವೆಲ್ಲಾ ಉಳಿಯುತ್ತೇವೆ. ಇದನ್ನ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದ ಅವರು ಮೈಸೂರಿನಲ್ಲಿ ನಾನು ಸಿಎಂ ಆಗಿದ್ದಾಗ ಮಾಡಿದ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಮಹಾರಾಣಿ ವಿಜ್ಞಾನ ಮತ್ತು ಕಲಾ ಕಾಲೇಜು ನಿರ್ಮಾಣಕ್ಕೆ ಈ ವರ್ಷದ ಬಜೆಟ್‍ನಲ್ಲಿ 56 ಕೋಟಿ ನೀಡಿದ್ದೇನೆ. ಹಾಸ್ಟೆಲ್‍ಗಳಿಗೆ 116 ಕೋಟಿ ನೀಡಿದ್ದೇನೆ, ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜು ಹಾಸ್ಟೆಲ್‍ಗಳಿಗೆ ನೀಡಲಾಗಿದೆ ಎಂದರು.
ಕಿದ್ವಾಯ್ ಆಸ್ಪತ್ರೆ, ಯುರಾಲಜಿ ವಿಭಾಗದ ಅಭಿವೃದ್ಧಿಗೆ ಹಣ ನೀಡಿದ್ದೆ. ಮೆಡಿಕಲ್ ಕಾಲೇಜಿನ 100 ವರ್ಷದ ಸಂಭ್ರಮಕ್ಕೆ ಹಣ ನೀಡಲಾಗಿದೆ. ಲ್ಯಾನ್ಸ್‍ಡೌನ್ ಬಿಲ್ಡಿಂಗ್, ದೇವರಾಜ ಮಾರುಕಟ್ಟೆ ಪುನರ್ ನಿರ್ಮಾಣಕ್ಕೆ ಬಜೆಟ್‍ನಲ್ಲಿ ಹಣವನ್ನು ನೀಡಲಾಗಿದೆ ಎಂದರು.
ನೀವು ನಮಗೆ ಐದು ವರ್ಷ ಅಧಿಕಾರ ನೀಡಿದ್ದು, ಐದು ವರ್ಷಗಳು ಸಹ ಸಂಪೂರ್ಣವಾಗಿ ಗ್ಯಾರೆಂಟಿ ಯೋಜನೆಗಳನ್ನು ಕೊಟ್ಟೇ ಕೊಡುತ್ತೇವೆ. ಬಸವಾದಿ ಶರಣರೇ ನಮಗೆ ಪ್ರೇರಣೆಯಾಗಿದ್ದು, ವಿಶ್ವಗುರು ಬಸವಣ್ಣನವರನ್ನ ಸಾಂಸ್ಕೃತಿಕ ನಾಯಕ ಎಂದು ಹೆಸರಿಟ್ಟಿದ್ದೇವೆ, ಹಿಂದಿನ ಅವಧಿಯಲ್ಲೂ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿದ್ದೆವು, ಈ ವರ್ಷವೂ ಎಲ್ಲ ಭರವಸೆ ಈಡೇರಿಸುತ್ತೇವೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ಇದು ಐತಿಹಾಸಿಕ ವೇದಿಕೆಯಾಗಿದ್ದು, ಇದೇ ವೇದಿಕೆ ಮೂಲಕ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಲಾಯಿತು. ಸರ್ಕಾರ ಬಂದ ಕೂಡಲೇ ಗೃಹಲಕ್ಷ್ಮಿ ಯೋಜನೆ ಅನುಷ್ಠಾನಗೊಳಿಸಿ ನುಡಿದಂತೆ ನಡೆದೆವು. ಇದರ ಜೊತೆಗೆ ಅನ್ನಭಾಗ್ಯ, ಯುವನಿಧಿ, ಶಕ್ತಿ ಯೋಜನೆ, ಗೃಹ ಜ್ಯೋತಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಎಲ್ಲ ವರ್ಗದ ಜನರ ಸರ್ವಾಂಗೀಣ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಬದ್ಧವಾಗಿದ್ದು, ನಿಮ್ಮ ಪರವಾಗಿರುವ ಸರ್ಕಾರದ ಪರವಾಗಿ ನೀವುಗಳ ನಿಮ್ಮ ಬೆಂಬಲ, ಆಶೀರ್ವಾದ ನೀಡಬೇಕಿದೆ ಎಂದು ತಿಳಿಸಿದರು.
ಪಶು ಸಂಗೋಪನಾ ಇಲಾಖೆ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್ ಮಾತನಾಡಿ, ವಿಧಾನಸಭಾ ಚುನಾವಣೆ ವೇಳೆ ಅಧಿಕಾರಕ್ಕೆ ಬಂದರೆ ಐದು ಗ್ಯಾರೆಂಟಿ ಜಾರಿಗೊಳಿಸುವ ಭರವಸೆ ನೀಡಲಾಗಿತ್ತು. ಚುನಾವಣೆ ವೇಳೆ ನೀಡಿದ ಮಾತನ್ನು ಈಡೇರಿಸಿದ್ದ ಏಕೈಕ ಸರ್ಕಾರ ಇದ್ದರೆ ಕಾಂಗ್ರೆಸ್ ಮಾತ್ರ. ವಿರೋಧ ಪಕ್ಷದ ನಾಯಕರು ನಮ್ಮ ಗ್ಯಾರೆಂಟಿಗಳ ಬಗ್ಗೆ ಸುಳ್ಳು ಪ್ರಚಾರ ಮಾಡಿತು. ಗ್ಯಾರೆಂಟಿ ಯೋಜನೆಗಳು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಶೇ.100ರಷ್ಟು ಅನುಷ್ಠಾನ ಆಗಬೇಕೆಂದು ಸಿಎಂ ಸೂಚಿಸಿದ್ದು, ಎಲ್ಲರೂ ಇದರ ಲಾಭ ಪಡೆಯಬೇಕಿದೆ. ಪಾರ್ಲಿಮೆಂಟ್ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆ ಇರಲ್ಲ ಎಂದು ವಿಪಕ್ಷಗಳು ಸುಳ್ಳು ಹೇಳುತ್ತಿವೆ. ನಮ್ಮ ಸರ್ಕಾರ ಅಧಿಕಾರದಲ್ಲಿರುವ ತನಕ ಈ ಯೋಜನೆ ಜಾರಿಯಲ್ಲಿರುತ್ತದೆ. ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಶಾಸಕರುಗಳಾದ ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ದರ್ಶನ್ ಧ್ರುವನಾರಾಯಣ್, ಕೆ.ಹರೀಶ್ ಗೌಡ, ಡಿ. ರವಿಶಂಕರ್, ಎ.ಆರ್. ಕೃಷ್ಣಮೂರ್ತಿ, ಎಂಎಲ್‍ಸಿಗಳಾದ ಮರಿತಿಬ್ಬೇಗೌಡ, ಡಾ.ಡಿ. ತಿಮ್ಮಯ್ಯ, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ. ಪುಷ್ಪ ಅಮರ್‍ನಾಥ್, ಸೂರಜ್ ಹೆಗ್ಡೆ, ವರುಣಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ, ಮುಡಾ ಅಧ್ಯಕ್ಷ ಕೆ. ಮರಿಗೌಡ, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಸರ್ಕಾರದ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಜಿಪಂ ಸಿಇಒ ಕೆ.ಎಂ. ಗಾಯತ್ರಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.