ಐದು ವರ್ಷಗಳಲ್ಲಿ ನಗರ ಪಾಲಿಕೆ- ಡಿಸಿಎಂ ಭರವಸೆ

ರಾಮನಗರ, ಏ ೨೧- ಮುಂದಿನ ಐದು ವರ್ಷಗಳಲ್ಲಿ ರಾಮನಗರ ನಗರಸಭೆಯನ್ನು ನಗರ ಪಾಲಿಕೆಯನ್ನಾಗಿ ರೂಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ನಗರದಲ್ಲಿ ಮಂಗಳವಾರ ರಾಮನಗರ ಮತ್ತು ಚನ್ನಪಟ್ಟಣ ನಗರಸಭೆಗಳ ಚುನಾವಣೆ ಪ್ರಚಾರಕ್ಕೆ ಚಾಲನೆ ಕೊಟ್ಟ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಸಂಖ್ಯೆ, ಅಭಿವೃದ್ಧಿ ಮತ್ತಿತರೆ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಸರ್ಕಾರ ನಗರ ಪಾಲಿಕೆ ಮಾಡುವ ಬಗ್ಗೆ ಅಗತ್ಯವಾದ ಎಲ್ಲ ಕ್ರಮ ಮತ್ತು ಸುಧಾರಣೆಗಳನ್ನು ಕೈಗೊಳ್ಳಲಿದೆ. ಹಾಗೆ ನೋಡಿದರೆ ರಾಮನಗರವು ನಗರ ಪಾಲಿಕೆ ಆಗುವ ಎಲ್ಲ ಅರ್ಹತೆಯನ್ನೂ ಹೊಂದಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ನಗರದ ಜನರು ನಗರ ಪಾಲಿಕೆಗೆ ಮತದಾನ ಮಾಡಲಿದ್ದಾರೆ. ಇದರಲ್ಲಿ ಎಳ್ಳಷ್ಟೂ ಅನುಮಾನ ಇಲ್ಲ ಎಂದರು.
ನಗರ ಪಾಲಿಕೆ ಮಾಡುವುದಾಗಿ ನಾವು ಕೇವಲ ಬಾಯಿ ಮಾತಿನ ವಾಗ್ದಾನ ಮಾಡುತ್ತಿಲ್ಲ. ಇದು ಬಿಜೆಪಿಯ ಗುರಿಯೂ ಹೌದು. ಈಗಾಗಲೇ ಅದಕ್ಕೆ ಬೇಕಾದ ಎಲ್ಲ ಪೂರಕ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತದೆ ಎಂದ ಅವರು ರಾಮನಗರ-ಚನ್ನಪಟ್ಟಣ ಅವಳಿ ನಗರಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ಮಾಡಲಾಗಿದೆ. ರಾಮನಗರ ಮತ್ತು ಬೆಂಗಳೂರು ನಡುವೆ ಉಪ ನಗರ ರೈಲು ಸಂಚಾರ ಹಾಗೂ ಜಿಲ್ಲಾ ಕೇಂದ್ರದಲ್ಲಿ ಸ್ಥಾಪನೆಯಾಗುತ್ತಿರುವ ಬೆಂಗಳೂರು ಸ್ನಾತಕೋತ್ತರ ಕೇಂದ್ರ ಶೀಘ್ರದಲ್ಲೇ ಪೂರ್ಣ ಪ್ರಮಾಣ ವಿಶ್ವವಿದ್ಯಾಲಯ ಆಗಲಿದೆ ಎಂದು ಡಿಸಿಎಂ ಭರವಸೆ ನೀಡಿದರು.
ಉಪನಗರ ರೈಲು ಸೌಲಭ್ಯ:
ರಾಮನಗರ ಮತ್ತು ಇಡೀ ಜಿಲ್ಲೆಯ ಜನರಿಗೆ ಬಹಳಷ್ಟು ಸಹಕಾರಿ ಆಗುವ ಉಪ ನಗರ ರೈಲು ಸಂಚಾರ ಆರಂಭಿಸಲಾಗುವುದು. ಬೆಂಗಳೂರಿನ ೫೭ ರೈಲು ನಿಲ್ದಾಣಗಳನ್ನು ಸಂಪರ್ಕಿಸಬಲ್ಲ ಈ ರೈಲು ಸಂಪರ್ಕ ಯೋಜನೆ ರೇಷ್ಮೆ ನಾಡಿಗೆ ವರದಾನವಾಗಿದೆ. ಒಟ್ಟು ನಾಲ್ಕು ಕಾರಿಡಾರ್‌ಗಳಿದ್ದು ಇಲ್ಲಿಂದಲೇ ರೋಲಿಂಗ್ ಸೆಂಟರ್ ಇಲ್ಲಿಯೇ ಸ್ಥಾಪನೆಯಾಗಲಿದೆ. ಉಪ ನಗರ ವ್ಯವಸ್ಥೆ ಬರುವುದಿಂದ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿ ಹೆಚ್ಚುತ್ತದೆ. ಮುಖ್ಯವಾಗಿ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿ ಬರುವ ಜನರಿಗೆ ಬಹಳ ಉಪಯೋಗವಾಗಲಿದೆ ಎಂದು ಅವರು ತಿಳಿಸಿದರು.
ರಸ್ತೆಗಳ ಬಗ್ಗೆ ಅಂಕಿ-ಅಂಶಗಳನ್ನು ತೆರೆದಿಟ್ಟ ಉಪಮುಖ್ಯಮಂತ್ರಿಗಳು, ರಾಮನಗರದಲ್ಲಿ ೧೯೦ ಕಿ.ಮೀ ಉದ್ದದ ರಸ್ತೆಯಿದ್ದು ಇದರಲ್ಲಿ ೧೫೦ ಕಿ.ಮೀ ನಷ್ಟು ರಸ್ತೆ ಡಾಂಬರೀಕರಣಗೊಂಡಿದೆ. ಉಳಿದ ೪೦ ಕಿ.ಮೀ ರಸ್ತೆ ಮಣ್ಣನಿಂದ ಕೂಡಿದೆ. ಇನ್ನು ಡಾಂಬರು ರಸ್ತೆ ಕೂಡ ಕಳಪೆಯಾಗಿದ್ದು ಇದೆಲ್ಲವನ್ನು ಅತ್ಯುತ್ತಮವಾಗಿ ಅಭಿವೃದ್ಧಿ ಪಡಿಸುವುದು. ಆಧುನಿಕ ಮಾನದಂಡಗಳ ಪ್ರಕಾರ ಗುಣಮಟ್ಟದ ರಸ್ತೆಗಳನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗುವುದು ಎಂದು ಅವರು ತಿಳಿಸಿದರು.
ನಗರದಲ್ಲಿ ನಾಲ್ಕು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಆದರೆ, ದಿನದ ೨೪ ಗಂಟೆಯೂ ನೀರು ಕೊಡುವ ಯೋಜನೆ ನಮ್ಮದು. ಕೆಲ ದಿನಗಳಲ್ಲಿಯೇ ನದಿಮೂಲಗಳಿಂದ ಪ್ರತಿ ಮನೆಗೂ ಪೈಪುಗಳ ಮೂಲಕ ನೀರೊದಿಗಿಸುವ ಮಹತ್ವಾಕಾಂಕ್ಷೆ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ನಗರದಲ್ಲಿ ಉತ್ತಮವಾಗಿ ಹಾಗೂ ವೈಜ್ಞಾನಿಕವಾಗಿ ಒಳಚರಂಡಿ ವ್ಯವಸ್ಥೆ ನಿರ್ಮಿಸಬೇಕಾಗಿದೆ. ನಗರದ ಎರಡು ಕೆರೆಗಳನ್ನು ಅಭಿವೃದ್ಧಿಪಡಿಸಿ ವಾಯುವಿಹಾರಕ್ಕೆ ವ್ಯವಸ್ಥೆ ಮಾಡುವುದು, ಎಲ್ಲ ಪಾರ್ಕ್ ಗಳ ಅಭಿವೃದ್ಧಿ ಹಾಗೂ ಅರ್ಕಾವತಿ ನದಿಯ ಪುನಶ್ಚೇತನ ಗೊಳಿಸುಗುವ ಉದ್ದೇಶವಿದೆ ಎಂದು ಹೇಳಿದರು.
ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣ ಆಗಿರುವ ಮೂರು ಬಡಾವಣೆಗಳು ಇನ್ನೂ ಸಂಪೂರ್ಣವಾಗಿ ಅಭಿವೃದ್ಧಿಯಾಗಿಲ್ಲ. ೧೯೯೩ರಲ್ಲಿ ಸ್ಥಾಪನೆಯಾದ ರಾಮನಗರ ಪ್ರಾಧಿಕಾರ ಈವರೆಗೂ ಒಂದು ಮಾಸ್ಟರ್ ಪ್ಲಾನ್ ರೂಪಿಸಿಲ್ಲ. ಹೀಗಾಗಿ ಅರೆಬರೆಯಾಗಿರುವ ಎಲ್ಲಾ ಕೆಲಸವನ್ನು ಪೂರ್ಣಗೊಳಿಲಾಗುವುದು. ರೇಷ್ಮೆ ಮಾರುಕಟ್ಟೆ ಅಭಿವೃದ್ಧಿ, ಮಾವು ಸಂಸ್ಕರಣಾ ಘಟಕ ಸ್ಥಾಪನೆ ಯೋಜನೆಗಳು ಶೀಘ್ರವೇ ಅನುಷ್ಠಾನಕ್ಕೆ ಬರಲಿವೆ ಎಂದರು.
ಜಿಲ್ಲೆಯಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಗಾಗಿ ಗುಣಮಟ್ಟದ ಶಿಕ್ಷಣಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗವುದು. ಸ್ಮಾರ್ಟ್ ಮ್ಯಾನಿಫ್ಯಾಕ್ಚರಿಂಗ್, ಜ್ಞಾನಾಧಾರಿತ ಕೈಗಾರಿಕೆ, ಪ್ರತಿಭಾಧಾರಿತ ಕೈಗಾರಿಕೆಗಳೆಂಬ ಪರಿಕಲ್ಪನೆಗಳು ಪ್ರಚಲಿತ ಕೈಗಾರಿಕೋದ್ಯಮದಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಇದಕ್ಕೆ ಅಗತ್ಯವಾದ ಶಿಕ್ಷಣ ಪಡೆಯಲು ಬೇಕಾದ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತದೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.
ಮತಯಾಚನೆಗೂ ಮುನ್ನ ನಗರದ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಾಲಯದ ಹೊರಗೆ ಪಕ್ಷದ ೨೧ ಆಭ್ಯರ್ಥಿಗಳಿಗೆ ಕರ್ತವ್ಯ ಮತ್ತು ಜನನಿಷ್ಠೆಯ ಪ್ರಮಾಣ ಬೋಧಿಸಿದರು. ಬಳಿಕ ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜ್ ಹಾಗೂ ಆಭ್ಯರ್ಥಿ ಜತೆಯಲ್ಲಿ ಡಿಸಿಎಂ ಮನೆ ಮನೆಗೂ ತೆರಳಿ ಮತ ಯಾಚನೆ ಮಾಡಿದರು.
ಇದೇ ಸಂದರ್ಭದಲ್ಲಿ ಚಾಮುಂಡೇಶ್ವರಿ ಬಡಾವಣೆ, ಗಾಂಧಿನಗರ, ಕಾಯಿಸೊಪ್ಪಿನ ಬೀದಿ, ಶೆಟ್ಟಹಳ್ಳಿಬೀದಿ, ಆಲದಮರ ಸರ್ಕಲ್, ಶಾಂತಿಲಾಲ್ ಲೇಔಟ್ ಮುಂತಾದ ವಾರ್ಡುಗಳಲ್ಲಿ ಡಿಸಿಎಂ ಪ್ರಚಾರ ಮಾಡಿದರು.