ಐದು ಲಕ್ಷ ಮೌಲ್ಯದ ಗಾಂಜಾ ವಶ ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮ ಗುದಗೆ ಸೇರಿ ಮೂವರ ಬಂಧನ

ಬಸವಕಲ್ಯಾಣ:ಡಿ.20:ಅಕ್ರಮವಾಗಿ ಗಾಂಜಾ ಸಂಗ್ರಹ ಮಾಡಿಕೊಂಡು ಬೇರೆ ಕಡೆ ಸಾಗಿಸುವಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ನಗರ ಠಾಣೆಯ ಪೋಲೀಸರು ತಂಡ ಮೂವರನ್ನು ಬಂಧಿಸಿರುವ ಘಟನೆ ಶನಿವಾರ ಜರುಗಿದೆ. ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮ ಗುದಗೆ, ಮಲ್ಲಿಕಾರ್ಜುನ ನಾಗಪ್ಪಾ ಸಗರ, ಹಾಗೂ ಛಾಯಾ ಗಂಡ ಬಾಳು ಭೊಸ್ಲೆ ಬಂಧಿತ ಆರೋಪಿಗಳಾಗಿದ್ದಾರೆ.

ವಿಶಾಖಪಟ್ಟಣಂನಿಂದ ಮಹಾರಾಷ್ಟ್ರದ ಮುಂಬೈಗೆ ಸಾಗಿಸುವಾಗ ನಗರದ ಹೊರವಲಯದಲ್ಲಿರುವ ಸಸ್ತಾಪೂರ ಬಂಗ್ಲಾ ಸಮೀಪ ಹೊಲವೊಂದರಲ್ಲಿ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಪೊಲೀಸರು ದಾಳಿ ನಡೆಸಿ ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ. ಸುಮಾರು ಐದು ಲಕ್ಷ ಮೌಲ್ಯದ 72 ಕೆಜಿ ಗಾಂಜಾ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಜಿಲ್ಲಾ ಪೊಲೋಸ್ ವರಿಷ್ಠಾಧಿಕಾರಿ ಡಿಎಲ್ ನಾಗೇಶ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ, ಹುಮನಾಬಾದ ಡಿವೈಎಸ್‍ಪಿ ಸೋಮಲಿಂಗ ಅವರ ಮಾರ್ಗದರ್ಶನದಲ್ಲಿ ಸಿಪಿಐ ನ್ಯಾಮಗೌಡ ಅವರ ನೇತ್ರತ್ವದಲ್ಲಿ ಪಿಎಸ್‍ಐ ಗುರು ಪಾಟೀಲ ಹಾಗೂ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ತಹಸೀಲ್ದಾರ ಸಾವಿತ್ರಿ ಎಸ್ ಸಲಗರ ಭೇಟಿ ನೀಡಿ ಪರಿಶೀಲಿಸಿದ್ದಾರೆ.