ಐದು ನಗರಸಭೆ, 61 ಸ್ಥಳೀಯ ಸಂಸ್ಥೆಗಳಿಗೆ ಡಿ. 27 ಚುನಾವಣೆ

ಬೆಂಗಳೂರು, ನ. ೨೯- ಐದು ನಗರ ಸಭೆ ೬೧ ಸ್ಥಳೀಯ ಸಂಸ್ಥೆ ಚುನಾವಣೆಗೆ ಡಿ.೨೭ ರಂದು ದಿನಾಂಕ ನಿಗದಿಪಡಿಸಿ, ಚುನಾವಣಾ ಆಯೋಗ ಇಂದು ವೇಳಾಪಟ್ಟಿ ಪ್ರಕಟಿಸಿದೆ.
ಈ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಅವಧಿ ಪೂರ್ಣಗೊಂಡ ಹಿನ್ನೆಲೆ ನಗರಸಭೆ ಸ್ಥಳೀಯ ಸಂಸ್ಥೆಗಳ ೧,೧೮೫ ವಾರ್ಡ್‌ಗಳ ಪ್ರತಿನಿಧಿಗಳ ಆಯ್ಕೆಗಾಗಿ ರಾಜ್ಯ ಚುನಾವಣಾ ಆಯೋಗ ಡಿ. ೨೭ ರಂದು ಚುನಾವಣೆ ದಿನಾಂಕ ನಿಗದುಪಡಿಸಿ ಪ್ರಕಟಣೆ ಹೊರಡಿಸಿದೆ.
೧೬ ಪುರಸಭೆ ಮತ್ತು ೩೪ ಪಟ್ಟಣ ಪಂಚಾಯಿತಿಗೂ ಚುನಾವಣೆ ದಿನಾಂಕ ನಿಗದಿಪಡಿಸಿರುವ ಚುನಾವಣಾ ಆಯೋಗ ಇದರೊಂದಿಗೆ ವಿವಿಧ ಕಾರಣಗಳಿಂದ ತೆರವಾಗಿರುವ ನಗರಸಭೆಗಳ ೫ ವಾರ್ಡ್‌ಗಳು, ಪುರಸಭೆಗಳ ೩ ಮತ್ತು ಪಟ್ಟಣ ಪಂಚಾಯಿತಿಯ ಒಂದು ವಾರ್ಡ್‌ಗೂ ಡಿ. ೨೭ ರಂದೇ ಚುನಾವಣೆ ನಿಗದಿಪಡಿಸಿದೆ.
ಆಯಾಯ ಜಿಲ್ಲಾಧಿಕಾರಿಗಳು ಡಿ. ೮ ರಂದು ಚುನಾವಣೆ ಅಧಿಸೂಚನೆ ಹೊರಡಿಸಲಿದ್ದಾರೆ. ಅಧಿಸೂಚನೆ ಅನ್ವಯ ಡಿ. ೧೫ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.
ಡಿ. ೧೬ ನಾಮಪತ್ರಗಳ ಪರಿಶೀಲನೆ, ಡಿ. ೧೮ ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದೆ. ಡಿ. ೩೧ರಂದು ಬೆಳಿಗ್ಗೆ ೮ ರಿಂದ ಆಯಾಯ ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಡಿ. ೩೦ ರಂದು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ ನೀತಿಸಂಹಿತೆ ಚುನಾವಣೆ ನಡೆಯುವ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಡಿ. ೮ ರಂದು ನೀತಿಸಂಹಿತೆ ಜಾರಿಯಾಗಲಿದ್ದು, ಡಿ. ೩೦ರವರೆಗೆ ನೀತಿಸಂಹಿತೆ ಜಾರಿಯಲ್ಲಿರಲಿದೆ ಎಂದು ತಿಳಿಸಿರುವ ರಾಜ್ಯ ಚುನಾವಣಾ ಆಯೋಗ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ನಗರ ಸಭೆ ಅಭ್ಯರ್ಥಿಗಳಿಗೆ ತಲಾ ೨ ಲಕ್ಷ, ಪುರಸಭೆ ೧.೫ ಲಕ್ಷ, ಮತ್ತು ಪಟ್ಟಣ ಪಂಚಾಯಿತಿಗಳಿಗೆ ೧ ಲಕ್ಷ ಚುನಾವಣಾ ವೆಚ್ಚ ನಿಗದಿಪಡಿಸಿ ಆದೇಶ ನೀಡಿದೆ.