ಐದು ನಕಲಿ ಆರ್.ಎಂ.ಪಿ ಕ್ಲಿನಿಕ್‌ಗಳ ಮೇಲೆ ದಾಳಿ

ಕೋಲಾರ ಆ,೬-ಜಿಲ್ಲೆಯಲ್ಲಿನ ನಕಲಿ ಕ್ಲಿನಿಕ್‌ಗಳ ವಿರುದ್ಧ ಸಮರ ಸಾರಿರುವ ಆರೋಗ್ಯ ಇಲಾಖೆಯು ಮಾಲೂರು, ಶ್ರೀನಿವಾಸಪುರ ಮತ್ತು ಬಂಗಾರಪೇಟೆ ತಾಲ್ಲೂಕುಗಳಲ್ಲಿ ಇದ್ದ ಐದು ನಕಲಿ ಕ್ಲಿನಿಕ್‌ಗಳ ಬಾಗಿಲಿಗೆ ಬೀಗ ಜಡಿದು ಬಂದ್ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಾಲೂರು ತಾಲ್ಲೂಕಿನ ಆರೋಗ್ಯ ಅಧಿಕಾರಿ ಡಾ.ಮಂಜುಳ ತಹಶೀಲ್ದಾರ್ ರಮೇಶ್ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ನೋಡೆಲ್ ಅಧಿಕಾರಿ ಡಾ|| ಚಂದನ್‌ಕುಮಾರ್ ನೇತೃತ್ವದ ತಂಡ ಟೇಕಲ್‌ನಲ್ಲಿ ಎರಡು ನಕಲಿ ಕ್ಲಿನಿಕ್‌ಗಳನ್ನು ಬಂದ್ ಮಾಡಿ, ಆರ್‌ಎಂಪಿ ಕ್ಲಿನಿಕ್ ನಡೆಸುತ್ತಿದ್ದ ವೈದ್ಯರಿಗೆ ನೋಟಿಸ್ ಜಾರಿಗೊಳಿಸಿದ್ದಾರ.
ಟೇಕಲ್ ಪದ್ಮನಾಭಯ್ಯ ಕಾಂಪ್ಲೆಕ್ಸ್ ಹಿಂಭಾಗದಲ್ಲಿದ್ದ ಮೋದಕ ಕ್ಲಿನಿಕ್ ನಡೆಸುತ್ತಿದ್ದ ಪ್ರಕಾಶ್ ಅವರನ್ನು ವಿಚಾರಣೆ ಮಾಡಿದಾಗ ಸಮರ್ಪಕ ದಾಖಲೆಗಳು ಸಿಗಲಿಲ್ಲ. ಕ್ಲಿನಿಕ್ ಹಾಗೂ ಪಕ್ಕದಲ್ಲಿದ್ದ ಮೆಡಿಕಲ್ ಸ್ಟೋರ್‌ಗೆ ಬೀಗ ಹಾಕಲಾಯಿತು.
ಟೇಕಲ್ ಸರ್ಕಲ್ ಬಳಿಯ ಶ್ರೀನಿವಾಸ ಎಂಬಾತ ಮಿನಿ ನರ್ಸಿಂಗ್ ಹೋಂ ತೆರೆದು ರೋಗಿಗಳನ್ನು ದಾಖಲಿಕೊಂಡಿದ್ದು ಇದನ್ನು ಕಂಡ ಆರೋಗ್ಯ ಅಧಿಕಾರಿಗಳು ದಿಗ್ಬ್ರಮೆಗೊಂಡರು. ಆತ ವೈದ್ಯ ಎಂಬುದಕ್ಕೆ ಯಾವ ದಾಖಲೆಯೇ ಇರಲಿಲ್ಲ, ಇದ್ದಿದ್ದು ಸಹ ನಕಲಿಯಾಗಿದ್ದವು. ಕ್ಲಿನಿಕ್‌ನ್ನು ಬಂದ್ ಮಾಡಿಸಿ ನೋಟೀಸ್ ನೀಡಲಾಯಿತು.
ದಾಳಿಯಲ್ಲಿ ನಾಡಕಛೇರಿ ಆರ್.ಐ ನಾರಾಯಣಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ಆನಂದ್, ಪೊಲೀಸ್ ಠಾಣೆ ಎಎಸ್‌ಐ ಗೋಪಾಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.