
ಬೆಂಗಳೂರು, ಮೇ.20- ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಘೋಷಿಸಿರುವ ಐದು ಗ್ಯಾರಂಟಿಗಳಿಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಗಿದೆ
ಎಂದು ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಪ್ರಮಾಣವಚನ ಸ್ವೀಕಾರ ಸಮಾರಂಭದ ನಂತರ ನಡೆದ ಚೊಚ್ಚಲ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಎಲ್ಲ ಕಾರ್ಯಕ್ರಮ ಅನುಷ್ಠಾನಕ್ಕೆ ಆದೇಶ ಹೊರಡಿಸುವಂತೆ ಸೂಚನೆ ನೀಡಲಾಗಿದೆ. ಮಾರ್ಗಸೂಚಿಗಳ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ವಿವರಿಸಿದರು.
ಈ ಐದು ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ತರಲು ಅಂದಾಜು 50 ಸಾವಿರ ಕೋಟಿ ರೂ. ಬೇಕಾಗುತ್ತದೆ. ರಾಜ್ಯದ ಬಜೆಟ್ ಮೂರು ಲಕ್ಷ ಹತ್ತು ಸಾವಿರ ಕೋಟಿ ತೆರಿಗೆ ಸಂಗ್ರಹ ಮಾಡುವ ಮೂಲಕ ಹೆಚ್ಚಿಸಬಹುದು ಎಂದರು.
ಜನರಿಗೆ ಕೊಟ್ಟ ಆಶ್ವಾಸನೆಯಂತೆ ಮೊದಲ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಜಾರಿಗೆ ತಂದಿದ್ದೇವೆ. ಹಿಂದೆಯೂ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂದು ಹೇಳಿದರು.
ಪ್ರಣಾಳಿಕೆಯಲ್ಲಿ ಇನ್ನೂ ಹಲವು ಭರವಸೆಗಳನ್ನು ನೀಡಿದ್ದೇವೆ. ಅವುಗಳನ್ನು ಹಂತ ಹಂತವಾಗಿ ಈಡೇರಿಸುತ್ತೇವೆ ಎಂದರು.
ಇಂದಿರಾ ಕ್ಯಾಂಟಿನ್ ಪುನಾರಂಭ
ಎಲ್ಲ ಇಂದಿರಾ ಕ್ಯಾಂಟಿನ್ ಗಳನ್ನು ಪುನರಾಂಭ ಮಾಡಲಾಗುವುದು ಎಂದ ಅವರು, ಈ ಕುರಿತು ಅಗತ್ಯ ಮಾಹಿತಿ ಸಲ್ಲಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
5 ಗ್ಯಾರಂಟಿ ಯೋಜನೆಗಳು
ಗೃಹಲಕ್ಷ್ಮಿ: ಮನೆಯೊಡತಿಗೆ ಮಾಸಿಕ 2 ಸಾವಿರ ರೂ.
ಗೃಹಜ್ಯೋತಿ: 200 ಯುನಿಟ್ ವರೆಗೆ ಉಚಿತ ವಿದ್ಯುತ್
ಅನ್ನ ಭಾಗ್ಯ: ಬಿಪಿಎಲ್ ಕಾರ್ಡುದಾರರಿಗೆ ಮನೆಯ ಪ್ರತಿ ಸದಸ್ಯನಿಗೆ 10 ಕೆಜಿ ಅಕ್ಕಿ ಉಚಿತ
ಯುವನಿಧಿ: ಈ ವರ್ಷದ ಪದವೀಧರರಿಗೆ ನಿರೋದ್ಯೋಗಿಯಾಗಿರುವವರಿಗೆ ಮಾಸಿಕ 3000 ರೂ. ಡಿಪ್ಲೋಮಾ ಪಾಸ್ ಆದವರಿಗೆ 1500 ರೂ. (ಎರಡು ವರ್ಷದವರೆಗೆ)
ಸರ್ಕಾರಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ. ಫ್ರೀ ಬಸ್ ಪಾಸ್ ನೀಡಲಾಗುವುದು.