ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿರುವುದಕ್ಕೆ ವಿಪಕ್ಷಗಳು ಸ್ವಾಗತಿಸಬೇಕು: ಎನ್.ಚೆಲುವರಾಯಸ್ವಾಮಿ

ಮಂಡ್ಯ: ಜೂ.04:- ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ ಘೋಷಣೆ ಮಾಡಿದಂತೆ ಐದು ಗ್ಯಾರಂಟಿಗಳನ್ನು ಏಕ ಕಾಲದಲ್ಲೆ ಜಾರಿಗೆ ತಂದಿದೆ. ಇದಕ್ಕೆ ವಿಪಕ್ಷಗಳು ಮೊದಲು ಸ್ವಾಗತಿಸಬೇಕೆ ಹೊರತು ವಿನಾಕಾರಣ ಟೀಕೆ ಮಾಡುವುದಲ್ಲ ಎಂದು ನೂತನ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕಿಡಿಕಾರಿದರು.
ಮಂಡ್ಯ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ನಡೆದ ಮಂಡ್ಯ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಕೃತಜ್ಞತಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು
ಕಾಂಗ್ರೆಸ್ ಪಕ್ಷವು ಘೋಷಣೆ ಮಾಡಿದಂತೆಯೇ 5 ಗ್ಯಾರಂಟಿಗಳನ್ನು ರಾಜ್ಯದ ಜನರಿಗೆ ತಲುಪಿಸಲು ವಾರ್ಷಿಕ 59,000 ಕೋಟಿ ವೆಚ್ಚ ಮಾಡಲು ಉದ್ದೇಶಿಸಿದೆ,ಇಡೀ ದೇಶದಲ್ಲಿಯೇ ಇಷ್ಟೊಂದು ಪ್ರಮಾಣದಲ್ಲಿ ಜನ ಕಲ್ಯಾಣ ಕಾರ್ಯಕ್ರಮಗಳಿಗೆ ಹಣ ನೀಡಿದ ಇತಿಹಾಸ ಕರ್ನಾಟಕವಲ್ಲದೇ ಬೇರೆ ಯಾವ ರಾಜ್ಯಕ್ಕೂ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ನ ನೂತನ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧ ಪಕ್ಷದ ನಾಯಕರುಗಳು ವಿನಾಕಾರಣ ಟೀಕೆ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ನಂತರ ಅಧಿಕಾರಕ್ಕೆ ಬಂದ ಯಾವುದೇ ಸರ್ಕಾರ ಇಂತಹ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದು ಜನ ಮೆಚ್ಚುಗೆಗಳಿಸಿರುವುದು ಯಾವುದೇ ಇತಿಹಾಸದಲ್ಲಿಲ್ಲ ಎಂದು ಸಮರ್ಥಿಸಿಕೊಂಡರು.
ಸರ್ಕಾರದ ಇಂತಹ ಮಹತ್ತರ ಯೋಜನೆಗಳ ಬಗ್ಗೆ ಈ ಹಿಂದೆ ತಲೆ ಕೆಡಿಸಿಕೊಳ್ಳದ ವಿರೋಧ ಪಕ್ಷಗಳು ಈಗ ಗ್ಯಾರಂಟಿ ಯೋಜನೆಗಳು ಜನಪ್ರಿಯತೆ ಪಡೆದುಕೊಂಡಿರುವುದನ್ನು ಕಂಡು ರಾಜ್ಯದ ಜನತೆಯಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ.ಯೋಜನೆಗಳಿಗೆ ಯಾವ ರೀತಿ ಸಂಪನ್ಮೂಲ ಕ್ರೂಡೀಕರಣ ಮಾಡಿ ಹೇಗೆ ಅನುಷ್ಟಾನಗೊಳಿಸ ಬೇಕೆನ್ನುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೊತ್ತಿದೆ ಎಂದು ವಿಪಕ್ಷ ನಾಯಕರ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.
ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ. ಮೊದಲು ಅಧಿಕಾರಿಗಳ ಸಭೆ ನಡೆಸಿ ಯಾವ ಯೋಜನೆಗಳು ಜಾರಿಗೆ ಬಂದರೆ ರೈತರಿಗೆ ಅನುಕೂಲವಾಗುತ್ತದೆ ಎಂಬುದನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಮೊದಲ ಸಚಿವ ಸಂಪುಟ ಸಭೆಯಲ್ಲೆ ಮೈಷುಗರ್ ಕಾರ್ಖಾನೆಯನ್ನು ಆಧುನೀಕರಣಗೊಳಿಸಿ ಆರಂಭ ಮಾಡಲು 50 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಖಾನೆಯನ್ನು ಹೊಸದಾಗಿ ನಿರ್ಮಾಣ ಮಾಡಿ ಕಬ್ಬು ಅರೆಯುವ ಸಾಮಥ್ರ್ಯದ ಜೊತೆಗೆ ಉಪ ಉತ್ಪನ್ನಗಳನ್ನು ತಯಾರಿಸಲು ಸರ್ಕಾರ ಬದ್ಧವಾಗಿದೆ ಎಂದು ಆಶ್ವಾಸನೆ ನೀಡಿದರು.
5 ವರ್ಷ ರಾಜ್ಯದಲ್ಲಿ ಅಧಿಕಾರ ನಡೆಸಿದ ಜಾ.ದಳ ಮತ್ತು ಬಿಜೆಪಿಯವರು ಕಾಂಗ್ರೆಸ್ ಜಾರಿಗೆ ತಂದಿದ್ದ ಕೃಷಿ, ಕ್ಷೀರ ಭಾಗ್ಯ ಸೇರಿದಂತೆ ಇಂದಿರಾ ಕ್ಯಾಂಟಿನ್‍ಗಳು ಹಲವು ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಿದರು.ಸುಳ್ಳು,ವಂಚನೆ ಮಾಡಿರುವ ಪಕ್ಷಗಳ ಮಧ್ಯೆ ನಮ್ಮನ್ನು ಗೆಲ್ಲಿಸಿರುವ ಜನತೆಗೆ ಕೃತಜ್ಞರಾಗಿರಬೇಕೆಂದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು.
ಮುಂದಿನ ಜುಲೈ ತಿಂಗಳಿನಿಂದ ಪ್ರತಿಯೊಬ್ಬರಿಗೆ 10 ಕೆ.ಜಿ. ಅಕ್ಕಿ ವಿತರಿಸಲಾಗುವುದು. ಜೂ. 11ರಿಂದ ಮಹಿಳೆಯರಿಗೆ ಸಾರಿಗೆ ಬಸ್‍ಗಳಲ್ಲಿ ಉಚಿತ ಪ್ರಯಾಣ,200 ಯೂನಿಟ್‍ವರೆಗೆ ವಿದ್ಯುತ್ ಬಿಲ್ ಕಟ್ಟುವಂತಿಲ್ಲ ಎಂದರು.
ಯೋಜನೆಗಳಲ್ಲೆ ಬಹುಮುಖ್ಯವಾದ ಗೃಹಲಕ್ಷ್ಮಿ ಯೋಜನೆ ಆ.15ರಿಂದ ಜಾರಿಗೆ ಬರಲಿದೆ.ಯಾರು ಮನೆಯ ಒಡತಿ ಆಗಿರುತ್ತಾರೋ ಅವರಿಗೆ ತಿಂಗಳಿಗೆ 2ಸಾವಿರ ರೂ.ಬರಲಿದೆ. ಇದಕ್ಕಾಗಿ 15 ರಿಂದ 20 ಸಾವಿರ ಕೋಟಿ ಖರ್ಚಾಗಲಿದೆ ಎಂದು ತಿಳಿಸಿದರು.
2018ರಲ್ಲಿ ಜಿಲ್ಲೆಯಲ್ಲಿ ಪಕ್ಷವು ಸೋಲನುಭವಿಸಿದ್ದನ್ನು ನೋಡಿದರೆ ನಾವ್ಯಾರು ಸಾರ್ವಜನಿಕರ ಮಧ್ಯೆ ಹೋಗಿ ನಿಲ್ಲಲು ಆಗುತ್ತಿರಲಿಲ್ಲ. ಆ ಸೋಲು ಜೀವನದಲ್ಲಿ ಅತ್ಯಂತ ಕೆಟ್ಟ ಕ್ಷಣ.ನಮ್ಮ ನಾಯಕರ ಬಳಿಯೂ ಹೋಗಲು ಹಿಂಜರಿಕೆ ಆಗುತ್ತಿತ್ತು. ನಮ್ಮನ್ನು ಮತ್ತೆ ಗೆಲ್ಲಿಸ್ತೀರಾ ಎಂದು ಕೊಂಡಿರಲಿಲ್ಲ.ಅಜ್ಜಯ್ಯ ಅವರು ನೀನು ಕಣ್ಣೀರು ಹಾಕಬೇಡ, ಜಿಲ್ಲೆಯ ಜನ ಮತ್ತೆ ನಿನ್ನನ್ನು ಗೆಲ್ಲಿಸುತ್ತಾರೆ ಎಂದು ಕಳೆದ 3 ವರ್ಷಗಳ ಹಿಂದೆ ಹೇಳಿದ್ದರು.ಅದರಂತೆ ಅದು ನಿಜವಾಗಿದೆ. ಈ ಬಾರಿ ಏನಾದರೂ ನಮ್ಮನ್ನು ಕೈಬಿಟ್ಟಿದ್ದರೆ ನಾವೆಲ್ಲ ಪಾತಾಳಕ್ಕೆ ಹೋಗುತ್ತಿದ್ದೆವು ಎಂದು ನುಡಿದರು.
ಪಕ್ಷವನ್ನು ಅಧಿಕಾರಕ್ಕೆ ತರಲು ಭಾರತ್ ಜೋಡೋ ಮೇಕೆದಾಟು, ಪ್ರಜಾಧ್ವನಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಿದೆವು. ಆದರೂ ಗೆಲುವಿನ ಬಗ್ಗೆ ನಂಬಿಕೆ ಇರಲಿಲ್ಲ. ಚುನಾವಣೆಯಲ್ಲಿ ಈರೀತಿಯ ಫಲಿತಾಂಶ ಕೊಡುತ್ತೀರಿ ಎಂದು ನಂಬಿರಲಿಲ್ಲ ಎಂದು ಹೇಳಿದರು.
ಬಿಜೆಪಿ ಮತ್ತು ಜಾ.ದಳದವರು ಗೆದ್ದು ಅಧಿಕಾರ ನಡೆಸಿದರೂ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದರು. ಯಾವುದೇ ಅಭಿವೃದ್ಧಿ ಕೆಲಸಗಳು ಆಗಲಿಲ್ಲ. ವಿಶ್ವಾಸ ಘಾತುಕರು ಯಾರು ಎಂಬುದನ್ನು ನೀವೇ ತೀರ್ಮಾನಿಸಿ ಎಂದು ಬಿಜೆಪಿ ಮತ್ತು ಜಾ.ದಳದ ನಾಯಕರನ್ನು ಚೇಡಿ ಸಿದರು.
ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಮಾತನಾಡಿ ಜಿಲ್ಲೆಯ ರೈತರ ಬದುಕನ್ನು ಬದಲಾಯಿಸಲು ನಾವೆಲ್ಲ ಶ್ರಮಿಸಬೇಕಾಗಿದೆ, ಅವರ ಬೇಡಿಕೆಗಳನ್ನು ಈಡೇರಿಸಬೇಕಾಗಿದೆ. ಹೊರಗಿನಿಂದ ಕಾಣುವಷ್ಟು ಮಂಡ್ಯ ಜಿಲ್ಲೆಯ ಜನರ ಬದುಕು ಹಸಿರಾಗಿಲ್ಲ. ಐದು ವರ್ಷ ಅಭಿವೃದ್ಧಿ ಕೆಲಸಕ್ಕಷ್ಟೇ ಆದ್ಯತೆ ಕೊಡೋಣ.ಇದಕ್ಕಾಗಿ ಪಕ್ಷಾತೀತವಾಗಿ ಹಾಗೂ ಸಂಘಟನೆಗಳ ಸಲಹೆ ಜಿಲ್ಲಾ ಕೇಂದ್ರವಾದ ಮಂಡ್ಯ ನಿರೀಕ್ಷಿತ ಅಭಿವೃದ್ಧಿಯಾಗಿಲ್ಲ. ಆದ್ದರಿಂದ ಇನ್ನು ಒಂದೂವರೆ ವರ್ಷದಲ್ಲಿ ಬದಲಾವಣೆ
ಯಾಗಬೇಕು. ಈ ನಿಟ್ಟಿನಲ್ಲಿ ಶಾಸಕ ರವಿಕುಮಾರ್ ಗಮನಹರಿಸಬೇಕು ಎಂದರು.
ಕಳೆದ ಚುನಾವಣೆಯ ಸೋಲಿನ ಬಳಿಕ ಕಾಂಗ್ರೆಸ್ ಮತ್ತೆ ಗೆಲುವು ಕಾಣಲು ಕಾರ್ಯಕರ್ತರ ಬೆವರಿನ ಹನಿಯೇ ಕಾರಣ. ಅವರೆಲ್ಲರ ಶ್ರಮದಿಂದಾಗಿ ಎರಡು ಎಂಎಲ್‍ಸಿ, ವಿಧಾನಸಭಾ ಚುನಾವಣೆ ಗೆಲುವು ಕಾಣುವಂತಾಗಿದೆ.ಇಂದು ಹಲವರು ಹಾರ ಹಾಕಲು ಮುಂದೆ ಬರುತ್ತಾರೆ. ಆದರೆ ಪಕ್ಷಕ್ಕೆ ದುಡಿದವರು ಯಾರೆಂದು ಗೊತ್ತಿದೆ.ಪಕ್ಷಕ್ಕಾಗಿ ನಾನು ಕೊನೆ ಉಸಿರುವವರೆಗೂ ದುಡಿಯುತ್ತೇನೆ.ಈ ಮೂಲಕ ರಾಹುಲ್‍ಗಾಂಧಿ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡುವವರೆಗೂ ಶ್ರಮಿಸೋಣ ಎಂದರು.
ಮಂಡ್ಯ ಶಾಸಕ ಪಿ.ರವಿಕುಮಾರ್ ಗೌಡ ಮಾತನಾಡಿ ಮಂಡ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿ
ದಂತೆ ಮಾಹಿತಿ ನೀಡಿ,ಸಕ್ಕರೆ ಕಾರ್ಖಾನೆಗೆ 50 ಕೋಟಿ ಅನುದಾನ ನೀಡಿದ ಮುಖ್ಯಮಂತ್ರಿಗಳಿಗೆ ವಂದನೆ ತಿಳಿಸಿದರು.ಕ್ಷೇತ್ರದ ಅಭಿವೃದ್ಧಿಗಾಗಿ 250 ಕೋಟಿ ರೂಗಳನ್ನು ಅನುದಾನವನ್ನು ಕೊಡಿಸುವಂತೆ ಕೃಷಿ ಸಚಿವರಲ್ಲಿ ಮನವಿ ಮಾಡಿದರು.
ನಿಷ್ಠಾವಂತ ಕಾರ್ಯಕರ್ತರ ಶ್ರಮದಿಂದಾಗಿ ನಾನು ಗೆದ್ದಿದ್ದೇನೆ. ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಮಂಡ್ಯ ದೊಡ್ಡ ಹಳ್ಳಿಯಂತಿದೆ. ಅದನ್ನು ನಗರವನ್ನಾಗಿ ಬದಲಾವಣೆ ಮಾಡಬೇಕಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಶಿವಣ್ಣ ಮಾತನಾಡಿ, ಹೋರಾಟದ ಬದುಕು ನಡೆಸಿಕೊಂಡು ಬಂದಿರುವ ನರೇಂದ್ರಸ್ವಾಮಿ ಅವರನ್ನು ಸಮಾಜಕಲ್ಯಾಣ ಇಲಾಖೆ ಸಚಿವರನ್ನಾಗಿ ಮಾಡಬೇಕಿತ್ತು.
ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸುತ್ತೇನೆ ಎಂದು ಹೇಳಿದರು.
ವೇದಿಕೆಯಲ್ಲಿ ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ಮಧು ಮಾದೇಗೌಡ, ದಿನೇಶ್ ಗೂಳಿಗೌಡ ಮಾಜಿ ಸಚಿವ ಎಂ.ಎಸ್.ಆತ್ಮಾ
ನಂದ, ಮಾಜಿ ಶಾಸಕರಾದ ಎಚ್.ಬಿ.ರಾಮು, ಕೆ.ಬಿ.ಚಂದ್ರಶೇಖರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಮಹಿಳಾಧ್ಯಕ್ಷೆ ಅಂಜನಾ ಶ್ರೀಕಾಂತ್, ಮನ್‍ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಪ್ಪ, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮುಖಂಡರಾದ ರವಿ ಭೋಜೇಗೌಡ, ವಿಜಯರಾಮೇಗೌಡ, ಬಿ.ಎಲ್.ದೇವರಾಜು, ಎಂ.ಎಸ್.ಚಿದಂಬರ್,ಡಾ.ಕೃಷ್ಣ, ವಿಜಯ್‍ಕುಮಾರ್ ಇತರರಿದ್ದರು.