ಕಲಬುರಗಿ,ಅ.1:ದೇಶದ ಇತಿಹಾಸ, ಸಂಸ್ಕøತಿ, ಕಲೆ, ಪರಂಪರೆ ಅರಿಯಲು ಅಧ್ಯಯನ ಮಾಡುವದರ ಜೊತೆಗೆ ಐತಿಹಾಸಿಕ, ಸುಕ್ಷೇತ್ರಗಳಿಗೆ ಖುದ್ದಾಗಿ ಭೇಟಿ ನೀಡುವುದು ಅಗತ್ಯವಾಗಿದೆ. ಅನೇಕ ಐತಿಹಾಸಿಕ ಸ್ಥಳಗಳು ಕಾಯಕಲ್ಪಕ್ಕೆ ಕಾದಿವೆ. ಅವುಗಳನ್ನು ಗುರುತಿಸಿ ಅಭಿವೃದ್ಧಿ ಹಾಗೂ ಸಂರಕ್ಷಣೆ ಮಾಡುವ ಕಾರ್ಯವಾಗಬೇಕಾಗಿದ ಎಂದು ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲ ಹೇಳಿದರು.
ಸೇಡಂ ತಾಲೂಕಿನ ಮಳಖೇಡ ಕೋಟೆಯಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕ್ಷೇತ್ರ ಭೇಟಿ, ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಮಳಖೇಡ ಐತಿಹಾಸಿಕ, ಸಾಹಿತ್ಯಿಕವಾಗಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ಕನ್ನಡ ಸಾಹಿತ್ಯ, ಭಾಷೆಯನ್ನು ಪ್ರೋತ್ಸಾಹಿಸಿ, ಬೆಳೆಸಿದ ರಾಷ್ಟ್ರಕೂಟ ಅರಸರ ಕೊಡುಗೆ ಅನನ್ಯ. ಶ್ರೀವಿಜಯನಿಂದ ರಚಿತವಾದ ‘ಕವಿರಾಜಮಾರ್ಗ’ ಕೃತಿ ಕನ್ನಡ ನಾಡಿನ ಪ್ರಥಮ ಉಪಲಬ್ದ ಗ್ರಂಥವಾಗಿದೆ. ಇಲ್ಲಿನ ಕೋಟೆಯ ಸ್ವಚ್ಛತೆಯನ್ನು ಕಾಪಾಡಿ, ಸಂರಕ್ಷಣೆ ಮಾಡಬೇಕಾಗಿದೆ. ನಮ್ಮೆ ನೆಲದ ಮಹತ್ವವನ್ನು ಎಲ್ಲೆಡೆ ವ್ಯಾಪಕವಾಗಿ ಪ್ರಚುರಪಡಿಸಬೇಕು ಎಂದರು.
ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ರಾಷ್ಟ್ರಕೂಟರ ಇತಿಹಾಸ, ಸಾಧನೆ ಸಾರುವ ಸ್ವರಚಿತ ಗೀತೆಯನ್ನು ಹಾಡಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ಶಿವಯೋಗಪ್ಪ ಬಿರಾದಾರ, ಅಸ್ಲಾಂ ಶೇಖ್, ಅಮರನಾಥ ಶಿವಮೂರ್ತಿ, ದೇವೇಂದ್ರಪ್ಪ ಗಣಮುಖಿ, ನಬಿಸಾಬ್ ಮಕನದಾರ್, ರಾಜಶೇಖರ ಪುರಾಣಿಕ, ನಾಗರಾಜ ನಂದೂರ, ಜಗದೇವಪ್ಪ ಹಾಗರಗಿ, ಭೀಮರಾಯ ಪಾಟೀಲ, ದೇವೇಂದ್ರಪ್ಪ ಪಿಲ್ಲಿ, ಕುಪ್ಪಣ್ಣ ಎಂ. ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.