ಐತಿಹಾಸಿಕ ಸ್ಥಳಗಳ ಒತ್ತುವರಿದಾರರ ವಿರುದ್ಧ ಶಿಸ್ತು ಕ್ರಮ

ಪಿರಿಯಾಪಟ್ಟಣ:ಏ.22: ಪಟ್ಟಣದ ಕೆಲ ಐತಿಹಾಸಿಕ ಸ್ಥಳಗಳನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ನವನಿರ್ಮಾಣ ವೇದಿಕೆಯ ಸದಸ್ಯರು ಪ್ರಾಚೀನ ಮತ್ತು ಪುರಾತತ್ವ ಇಲಾಖೆಗೆ ದೂರು ಸಲ್ಲಿಸಿದ ಹಿನ್ನೆಲೆ ಇಲಾಖೆಯ ಸಹಾಯಕ ನಿರ್ದೇಶಕಿ ಡಾ.ಮಂಜುಳಾ ಪಟ್ಟಣದ ಹಲವೆಡೆ ಭೇಟಿ ನೀಡಿ ಪರಿಶೀಲಿಸಿದರು.
ಪಟ್ಟಣದ ಕೋಟೆ ಚನ್ನಕೇಶವ ದೇವಾಲಯದ ಸುತ್ತಮುತ್ತ ಸುಮಾರು ಮುನ್ನೂರು ಮೀಟರ್ ಉದ್ದಗಲಕ್ಕೂ ಕೋಟೆ, ಕೊತ್ತಲ, ಕಂದಕ, ಐತಿಹಾಸಿಕ ಸ್ಮಾರಕ, ಪುರಾತನ ಗೋಡೆಗಳಿದ್ದು ಅವುಗಳನ್ನು ಕೆಲವು ಖಾಸಗಿ ವ್ಯಕ್ತಿಗಳು ನಾಶಮಾಡಿ ಮನೆ ನಿರ್ಮಾಣ ಮಾಡಿದ್ದು ಅದರಲ್ಲೂ ಪಟ್ಟಣದ ಖಾಸಗಿ ವೈದ್ಯ ಡಾ.ಸುಬ್ರಹ್ಮಣ್ಯ ಎಂಬುವರು ಕೋಟೆ ಕಂದಕವನ್ನು ನಾಶಮಾಡಿ ಸೈಟ್ ನಿರ್ಮಾಣ ಮಾಡುತ್ತಿದ್ದಾರೆಂದು ಆರೋಪಿಸಿ ಪಟ್ಟಣದ ನವನಿರ್ಮಾಣ ವೇದಿಕೆಯ ಸದಸ್ಯರಾದ ಅಣ್ಣಯ್ಯ, ದೇವಣ್ಣ, ಎಚ್.ಡಿ ರಮೇಶ್, ಕಿಶೋರ್, ವಿಷ್ಣು, ರವಿ ಸೇರಿದಂತೆ ಹಲವರು ಮೈಸೂರಿನ ಪ್ರಾಚೀನ ಪುರಾತತ್ವ ಇಲಾಖೆಗೆ ದೂರು ಸಲ್ಲಿಸಿದ್ದರು.
ದೂರಿನಲ್ಲಿ ಉಲ್ಲೇಖಿಸಿದ ಸ್ಥಳಗಳನ್ನು ಪರಿಶೀಲಿಸಿದ ಪ್ರಾಚೀನ ಪುರತತ್ವ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಮಂಜುಳಾ ಮಾತಾನಾಡಿ ದೂರಿನ ಸಮಗ್ರ ಮಾಹಿತಿ ಹಾಗೂ ನನ್ನ ವರದಿಯನ್ನು ಇಲಾಖೆಯ ಆಯುಕ್ತರಿಗೆ ಸಲ್ಲಿಸಿ ಸ್ಥಳದ ಇತಿಹಾಸವನ್ನು ಸಮಗ್ರವಾಗಿ ಅಭ್ಯಸಿಸಿ ಪುರಾತತ್ವ ಇಲಾಖೆಗೆ ಸಂಬಂಧಿಸಿದ ಜಾಗಗಳ ಹಾಗೂ ಸಾಕ್ಷಿಗಳ ನಾಶವನ್ನು ಮಾಡಿದ್ದೇ ಆದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪುರಾತತ್ವ ಇಲಾಖೆಗೆ ಸಂಬಂಧಿಸಿದ ಶ್ರೀ ಚನ್ನಕೇಶವ ದೇವಾಲಯದ ಸುತ್ತಮುತ್ತ ಸುಮಾರು ಮುನ್ನೂರು ಮೀಟರ್ ನಿಷೇಧಿತ ಪ್ರದೇಶವೆಂದು ಹೇಳಲಾದ ಜಾಗವನ್ನು ಸ್ಥಳೀಯರು ಅತಿಕ್ರಮಿಸಿಕೊಂಡಿದ್ದಾರೆ ಎಂದು ಆರೋಪಿಸಿ ಇತಿಹಾಸ ಸಂಶೋಧಕರೊಬ್ಬರು ಈ ಹಿಂದೆ ದೂರು ಸಲ್ಲಿಸಿ ಹೋರಾಟ ನಡೆಸಿದ್ದರು.
ಈ ಸಂದರ್ಭ ನವ ನಿರ್ಮಾಣ ವೇದಿಕೆ ಸದಸ್ಯರು, ಕಂದಾಯಾಧಿಕಾರಿ ಪಾಂಡುರಂಗ, ಪುರಸಭೆ ಮುಖ್ಯಾಧಿಕಾರಿ ಪ್ರಸನ್ನಕುಮಾರ್, ಪುರಾತತ್ವ ಇಲಾಖೆ ಮ್ಯೂಸಿಯಂ ಕ್ಯುರೇಟರ್ ಸುನೀಲ್ ಕುಮಾರ್, ಪುರಾತತ್ವ ಸಹಾಯಕರಾದ ಎನ್.ಎಲ್ ಗೌಡ, ಬಿಜೆಪಿ ತಾಲ್ಲೂಕು ಮಾಜಿ ಅಧ್ಯಕ್ಷ ಪಿ.ಜೆ ರವಿ, ಪುರಸಭಾ ಸದಸ್ಯ ರವಿಕುಮಾರ್ ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.