ಮೈಸೂರು: ಮಾ.25:- ಈಗಾಗಲೇ 100ಕ್ಕೂ ಹೆಚ್ಚು ವಿವಿಧ ಬೃಹತ್ ಹಾರಗಳಿಂದ ಗಿನ್ನಿಸ್ ದಾಖಲೆ ಬರೆದಿರುವ ಜಾತ್ಯಾತೀತ ಜನತಾದಳದ ಪಂಚರತ್ನ ಯಾತ್ರೆಯ ಸಮಾರೋಪ ಸಮಾವೇಶವೂ ಸಹ ಮತ್ತೊಂದು ದಾಖಲೆ ನಿರ್ಮಿಸುವ ಯತ್ನ ನಡೆದಿದ್ದು, ಇದಕ್ಕಾಗಿ ಹಳೆ ಮೈಸೂರು ಸಕಲ ಸಿದ್ಧತೆ ಕೈಗೊಂಡಿದೆ.
ಕಳೆದ ನವೆಂಬರ್ 1ರ ಕೋಲಾರ ಜಿಲ್ಲೆಯ ಮುಳಬಾಗಿಲಿನಿಂದ ಆರಂಭಗೊಂಡ ಪಂಚರತ್ನ ಯಾತ್ರೆ ಮಾ.26ಕ್ಕೆ 116 ದಿನಗಳು ಪೂರೈಸಲಿವೆ. ಈ ವೇಳೆ ಬರೋಬ್ಬರಿ 100ಕ್ಷೇತ್ರಗಳಲ್ಲೂ ಅಬ್ಬರದ ಪ್ರಚಾರ ಹಾಗೂ 80ಕ್ಕೂ ಹೆಚ್ಚು ಸಭೆಗಳನ್ನು ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ನೇತೃತ್ವದಲ್ಲಿ ನಡೆಸಲಾಗಿದೆ. ಈ ಯಾತ್ರೆ ಜೆಡಿಎಸ್‍ನ ನೆಲೆಯಾಗಿರುವ ಹಳೆ ಮೈಸೂರು ಭಾಗದಲ್ಲಿ ಸಮಾರೋಪ ಆಗುತ್ತಿದ್ದು, ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ರಾಮನಗರ ಭಾಗದಿಂದಲೂ 8ಲಕ್ಷಕ್ಕೂ ಹೆಚ್ಚು ಮಂದಿ ಕಾರ್ಯಕರ್ತರನ್ನು ಸೇರಿಸುವ ಗುರಿಯೊಂದಿಗೆ ಹಾಲಿ ಅಭ್ಯರ್ಥಿಗಳು ಹಾಗೂ ಆಕಾಂಕ್ಷಿಗಳು ಉತ್ಸುಕರಾಗಿದ್ದಾರೆ.
ಎಚ್‍ಡಿಡಿ ರೋಡ್ ಶೋ: ಈ ನಡುವೆ ಬೆಂಗಳೂರಿನಿಂದ ಇದ್ದ ರೋಡ್ ಶೋ ಅನ್ನು ವೈದ್ಯರ ಸಲಹೆ ಮೇರೆಗೆ ಶ್ರೀರಾಂಪುರದಿಂದ 4ಕಿ.ಮೀ ಅನ್ನು ಒಂದು ತಾಸಿನಲ್ಲಿ ಪೂರೈಸಲು ನಿರ್ಧರಿಸಲಾಗಿದೆ. ಈ ವೇಳೆ 50ಕ್ಕೂ ಹೆಚ್ಚು ಬೃಹತ್ ಹಾರಗಳನ್ನು ದೇವೇಗೌಡರಿಗೆ ಅರ್ಪಿಸಿ ಅವರಿಗೆ ಬೆಂಬಲದೊಂದಿಗೆ ಜೆಡಿಎಸ್ ಶಕ್ತಿ ಪ್ರದರ್ಶಿಸುವ ಪ್ರಯತ್ನವೂ ಸಾಗಿದೆ. ಇದಕ್ಕಾಗಿ ಜಿ.ಟಿ.ದೇವೇಗೌಡ, ಸಾರಾ ಮಹೇಶ್, ಕೆ.ಮಹದೇವ್, ಸಿ.ಎನ್.ಮಂಜೇಗೌಡ, ಅಶ್ವಿನ್‍ಕುಮಾರ್, ಮಂಡ್ಯ ಜಿಲ್ಲೆಯ ಏಳು ಶಾಸಕರು ಸೇರಿ ಹಳೆ ಮೈಸೂರು ಭಾಗದ ಸ್ಥಳೀಯ ಜನನಾಯಕರು, ಮುಖಂಡರು ಸೇರಿ ಅನೇಕರು ಅವಿರತವಾಗಿ ದುಡಿಯುತ್ತಿದ್ದಾರೆನ್ನಲಾಗಿದೆ.
ಎರಡನೇ ಪಟ್ಟಿ ಘೋಷಣೆ ಸಾಧ್ಯತೆ: ಇನ್ನೂ ಪಂಚರತ್ನ ಸಮಾರೋಪದ ಸಮಾವೇಶದಲ್ಲೇ ಜೆಡಿಎಸ್‍ನ ಎರಡನೇ ಪಟ್ಟಿಯನ್ನು ಸ್ವತಃ ಎಚ್.ಡಿ.ದೇವೇಗೌಡರೇ ಬಿಡುಗಡೆ ಮಾಡುವ ನಿರೀಕ್ಷೆಯೂ ಸಹ ಇದೆ. ಆದರೆ, ಈ ಬಗ್ಗೆ ಇನ್ನೂ ಅಂತಿಮವಾಗಿಲ್ಲ. ಹಾಗೊಂದು ವೇಳೆ ಪಟ್ಟಿ ಬಿಡುಗಡೆಯಾದರೆ, ಈಗಾಗಲೇ ನೂರು ಕ್ಷೇತ್ರ ಸುತ್ತಿರುವ ಎಚ್‍ಡಿಕೆ ಮುಂದೆ ಆ ಅಭ್ಯರ್ಥಿಗಳ ಪರವಾಗಿಯೂ ಉಳಿದ ಕ್ಷೇತ್ರ ಸುತ್ತುತ್ತಾರೆ ಎನ್ನಲಾಗಿದೆ. ಈ ಮೂಲಕ ಕಾಂಗ್ರೆಸ್‍ನ ಭಾರತ್ ಜೋಡೋ, ಜನಶಕ್ತಿಯಾತ್ರೆ ಹಾಗೂ ಬಿಜೆಪಿಯ ವಿಜಯಯಾತ್ರೆಗೆ ಪರ್ಯಾಯವಾಗಿ ಜೆಡಿಎಸ್‍ನ ಪಂಚರತ್ನಯಾತ್ರೆ ಯಶಸ್ಸು ಸಾಧಿಸಲು ಮುಂದಡಿ ಇಟ್ಟಿದೆ. ಆ ಮೂಲಕ ಜನಮತ ಸೆಳೆಯುವ ಮಂಚೂಣಿ ಪ್ರಯತ್ನಕ್ಕೆ ಜೆಡಿಎಸ್ ತನ್ನ ಭದ್ರ ಕೋಟೆಯಲ್ಲಿ ಕೈ ಹಾಕಿದೆ.