ಐತಿಹಾಸಿಕ ಮಾವಿನ ಕೆರೆ : ಒತ್ತುವರಿ ತಡೆ ತೆರವು – ಕೆರೆ ಪ್ರಾಧಿಕಾರದಿಂದಲೇ ನಿರ್ಲಕ್ಷ್ಯೆ

 • ಊರಿನ ಘನತ್ಯಾಜ್ಯ : ಕೆರೆ ಸಮತಟ್ಟಿಗೆ ಬಳಕೆ – ಐ.ಬಿ.ರೋಡ್ ಬಳಿ ಲೇಔಟ್ ನಿರ್ಮಾಣ
  ರಾಯಚೂರು.ಮಾ.೨೭- ನಗರದ ಐತಿಹಾಸಿಕ ಮತ್ತು ಹೃದಯ ಭಾಗದಲ್ಲಿರುವ ಮಾವಿನ ಕೆರೆ ಒತ್ತುವರಿ ಬಗ್ಗೆ ಜಿಲ್ಲಾಡಳಿತ ಮತ್ತು ನಗರಸಭೆ ಗಂಭೀರವಾಗಿಲ್ಲ ಎನ್ನುವುದಕ್ಕೆ ಅಲ್ಲಿ ನಡೆಯುತ್ತಿರುವ ಚಟುವಟಿಕೆಗಳು ನಿದರ್ಶನವಾಗಿವೆ.
  ಕಳೆದ ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ಮಾವಿನ ಕೆರೆಗೆ ಭೇಟಿ ನೀಡಿ, ಪರಿಶೀಲಿಸಿದರು. ಕೆರೆ ಅಭಿವೃದ್ಧಿ ಪ್ರಾದಿಕಾರದಿಂದ ಮಾವಿನ ಕೆರೆ ಅಭಿವೃದ್ಧಿಗೆ ಸಂಬಂಧಿಸಿ ಯೋಜನೆ ಸಿದ್ಧಪಡಿಸಲಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರದ ಒಟ್ಟು ೧೧ ಕೋಟಿ ಅನುದಾನವಿದ್ದು, ಈ ಅನುದಾನದಲ್ಲಿ ಕೆರೆಯ ಸಮಗ್ರ ಅಭಿವೃದ್ಧಿಗಾಗಿ ಯೋಜಿಸಲಾಗಿದೆ. ಹೂಳು ತೆಗೆಯುವುದು, ಹುಸೇನ್ ಸಾಗರ ಮಾದರಿಯಲ್ಲಿ ಮಧ್ಯದಲ್ಲಿ ಧ್ವಜಕಟ್ಟೆಯನ್ನು ನಿರ್ಮಿಸುವುದು, ನಂದೀಶ್ವರ ಗುಡಿಯ ಭಾಗದಲ್ಲಿ ಮಕ್ಕಳಿಗೆ ಪಾರ್ಕ್ ಮಾಡುವುದು ಪ್ರಮುಖ ಯೋಜನೆಗಳಾಗಿವೆ.
  ಆದರೆ, ಈ ಯೋಜನೆ ಕೈಗೆತ್ತಿಕೊಳ್ಳುವ ಅವಧಿಯಲ್ಲಿ ಕೆರೆಯ ಎಷ್ಟು ಜಮೀನು ಅತಿಕ್ರಮಣಕ್ಕೆ ಗುರಿಯಾಗುತ್ತದೆ ಎನ್ನುವುದೇ ಇಲ್ಲಿ ಪ್ರಮುಖ ಪ್ರಶ್ನೆಯಾಗಿದೆ. ಈಗಾಗಲೇ ಐ.ಬಿ.ರಸ್ತೆಯಲ್ಲಿ ಅತಿಕ್ರಮಣಕ್ಕಾಗಿ ಕೆರೆಯಲ್ಲಿ ಮಣ್ಣು ತುಂಬಲಾಗಿದೆ. ಮತ್ತೊಂದು ಕಡೆ ಕಲ್ಲಿನ ಗೋಡೆ ಕಟ್ಟಲಾಗಿದೆ. ಅಲ್ಲಲ್ಲಿ ಡಬ್ಬಾಗಳನ್ನು ಇಡಲಾಗಿದೆ. ಮತ್ತೊಂದು ಕಡೆ ಪಾತಾಳ ಆಂಜಿನೇಯ್ಯ ದೇವಸ್ಥಾನ ಬಳಿ ನಗರದ ತ್ಯಾಜ್ಯವನ್ನು ತಂದು ರಾಶಿ ರಾಶಿ ಹಾಕಲಾಗಿದೆ. ಇದನ್ನು ಕೆರೆಗೆ ತಳ್ಳುವ ಮೂಲಕ ಸಮತಟ್ಟು ಮಾಡಲಾಗುತ್ತದೆ.
  ಈ ರೀತಿ ಕೆರೆ ಪ್ರಮುಖ ಭಾಗವನ್ನೇ ಅತಿಕ್ರಮಿಸುತ್ತಿದ್ದರೂ, ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ೧೧ ಕೋಟಿ ಅನುದಾನದಲ್ಲಿ ಕೆರೆಗೆ ಗಡಿಯನ್ನು ನಿರ್ಮಿಸಿ, ಅತಿಕ್ರಮಣಗೊಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಾ, ಆಲೋಚಿಸುತ್ತಿಲ್ಲ. ಇದರಿಂದಾಗಿ ಕೆರೆ ಒತ್ತುವರಿದಾರರಿಗೆ ಭಾರೀ ಅನುಕೂಲವಾಗಿದೆ. ಸ್ಥಳೀಯ ರಾಜಕಾರಣಿಗಳ ಪ್ರಭಾವದಿಂದ ಕೆರೆಯ ಭಾಗ ನಿಧಾನಕ್ಕೆ ಒತ್ತುವರಿ ಮಾಡಲಾಗುತ್ತಿದೆ. ಈಗಾಗಲೇ ಸುಮಾರು ೧೦ ರಿಂದ ೧೫ ಎಕರೆ ಜಮೀನು ಒತ್ತುವರಿಯಾಗಿದೆ ಎನ್ನುವುದು ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ.
  ಈ ಒತ್ತುವರಿ ಅಪಾಯವಿದ್ದರೂ, ಯಾರು ಸಹ ಅದಕ್ಕೊಂದು ಗಡಿ ನಿರ್ಮಿಸುವ ಪ್ರಯತ್ನ ಮಾಡುತ್ತಿಲ್ಲ. ಪ್ರಸ್ತುತ ಮಾವಿನ ಕೆರೆ ಸುತ್ತಮುತ್ತ ಜಮೀನು ಬೆಲೆ ಭಾರೀ ದುಬಾರಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜಕಾರಣಿಗಳು ನಗರಸಭೆಯಲ್ಲಿ ಖಾತಾ, ಚಿಟ್ಟಾ ಬುಕ್, ಹೀಗೆ ಒಂದೊಂದು ಪುಸ್ತಕದಲ್ಲಿ ಅನಾಮಿಕರ ಹೆಸರು ಸೇರಿಸಿ, ನಂತರ ನಗರಸಭೆಯಲ್ಲಿ ಓಓಎಲ್ ಆಸ್ತಿಗೆ ಪಟ್ಟಾ ನೀಡುವ ಕೆಟ್ಟ ಪರಂಪರೆ ಈಗ ಅನುಷ್ಠಾನದಲ್ಲಿದೆ. ಈ ರೀತಿ ನಗರದ ಸುಮಾರು ೭೦೦ ವರ್ಷಗಳ ಐತಿಹಾಸ ಹೊಂದಿದ ಮಾವಿನ ಕೆರೆ ಸೊರಗುತ್ತಾ, ಸಾಗಿದೆ.
  ಇದನ್ನು ರಕ್ಷಿಸುವ ಜವಾಬ್ದಾರಿಯುತ ಅಧಿಕಾರಿಗಳು ಇನ್ನೂ ಎಚ್ಚರಗೊಳ್ಳದಿರುವುದು ಒತ್ತುವರಿದಾರ ಭೂಗಳ್ಳರಿಗೆ ಅನುಕೂಲವಾಗಿದೆ. ಜಿಲ್ಲಾಧಿಕಾರಿಗಳು ಕೆರೆಯ ಸಮಗ್ರ ಸರ್ವೇ ನಡೆಸಿ, ಒತ್ತುವರಿಯಾದ ಸ್ಥಳ ಗುರುತಿಸಿ, ಆ ಬಗ್ಗೆ ಕಾನೂನಾತ್ಮಕ ಕ್ರಮ ಕೈಗೊಳ್ಳುವತ್ತಾ, ಗಮನ ಹರಿಸುವುದರೊಂದಿಗೆ ಮತ್ತೇ ಒತ್ತುವರಿಯಾಗದಂತೆ ತಡೆಯಲು ಕ್ರಮ ಕೈಗೊಳ್ಳಬೇಕಾಗಿದೆ. ಪ್ರತಿ ಸಲ ಯಾರೋ ಒತ್ತುವರಿ ಮಾಡಿ, ಸುಳ್ಳು ದಾಖಲೆ ತೋರುವುದು, ನ್ಯಾಯಾಲಯಕ್ಕೆ ಹೋಗಿ ಟ್ರಸ್ಟ್ ಪಾಸ್ ಬೋರ್ಡ್ ಹಾಕುವುದು, ವ್ಯವಹಾರಗಳಿಗೆ ಕಡಿವಾಣ ಹಾಕಿದಂತಾಗುತ್ತದೆ.
  ೧೧ ಕೋಟಿ ಅನುದಾನವನ್ನು ಮೊದಲು ಈ ಬಹುಕೋಟಿ ಆಸ್ತಿ ಸಂರಕ್ಷಣೆಗೆ ಬಳಕೆ ಮಾಡಿ, ನಂತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರೇ, ಕನಿಷ್ಟ ಐತಿಹಾಸಿಕ ಈ ಕೆರೆ ಒತ್ತುವರಿಯಿಂದ ಉಳಿಸಲು ಸಾಧ್ಯವಾಗುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಯೋಚಿಸದಿದ್ದರೇ, ಕೆರೆ ಒತ್ತುವರಿ ಪ್ರಕ್ರಿಯೆಗೆ ಪರೋಕ್ಷವಾಗಿ ಸಂಬಂಧಪಟ್ಟ ಅಧಿಕಾರಿಗಳು ನೆರವು ನೀಡಿದಂತಹ ಗುರುತರ ಆರೋಪಕ್ಕೆ ಗುರಿಯಾಗಬೇಕಾಗುತ್ತದೆ.