ಐತಿಹಾಸಿಕ ದಾಖಲೆಗಳ ಮಹತ್ವ ಅರಿಯಿರಿ

ಸಂಜೆವಾಣಿ ನ್ಯೂಸ್
ಮೈಸೂರು: ಜೂ.08:- ದಾಖಲೆಗಳು ಇತಿಹಾಸದ ಮೂಲಾಧಾರವಾಗಿದ್ದು, ಅವುಗಳ ಮಹತ್ವ ಅರಿಯುವುದರ ಜತೆಗೆ ಸಂರಕ್ಷಣೆಯ ಹೊಣೆ ಕೂಡ ನಮ್ಮೆಲ್ಲರದು ಎಂದು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಮೈಸೂರು ವಿಭಾಗೀಯ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ.ಹೆಚ್.ಎಲ್ ಹೇಳಿದರು.
ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಹಾಗೂ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಮೈಸೂರಿನ ವಿಭಾಗೀಯ ಪತ್ರಾಗಾರ ಕಚೇರಿ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಪತ್ರಾಗಾರ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ ದಾಖಲೆಗಳ ಮಹತ್ವ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೈಸೂರು ಪ್ರಜಾಪ್ರತಿನಿಧಿ ಸಭೆ ಸ್ಥಾಪನೆಯ ನಡಾವಳಿಗಳು, ಮೈಸೂರು ರಾಜ್ಯ ಸ್ಥಾಪನೆ, ಕರ್ನಾಟಕ ಏಕೀಕರಣ ಚಳವಳಿ, ಮೈಸೂರು ಚಲೋ ಚಳವಳಿ ಮುಂತಾದ ಐತಿಹಾಸಿಕ ಘಟನಾವಳಿಗಳ ದಾಖಲೆಗಳನ್ನು ಮುಂದಿನ ಪೀಳಿಗೆಯವರಿಗೂ ತಲುಪಿಸುವ ನಿಟ್ಟಿನಲ್ಲಿ ಪತ್ರಾಗಾರ ಇಲಾಖೆಯ ಕಾರ್ಯಚಟುವಟಿಕೆಗಳನ್ನು ಪ್ರಸ್ತುತಿಯ ಮೂಲಕ ಸವಿವರವಾಗಿ ತಿಳಿಸಿದರು. ಪತ್ರಾಗಾರ ಇಲಾಖೆಯು ಇದುವರೆಗೂ ಒಟ್ಟು 1.20 ಕೋಟಿ ಪುಟಗಳ ದಾಖಲೆಗಳನ್ನು ಗಣಕೀಕರಣ ಮೂಲಕ ತಮ್ಮ ವೆಬ್‍ಸೈಟ್‍ನಲ್ಲಿ ಅಳವಡಿಸಿದೆ. ಈ ದಾಖಲೆಗಳನ್ನು ಅಧ್ಯಾಪಕರು, ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಜನಸಾಮಾನ್ಯರು ಸಹ ವೀಕ್ಷಿಸಬಹುದು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ, ಪತ್ರಾಗಾರಗಳ ಇತಿಹಾಸ, ದಾಖಲಾತಿಗಳ ಸಂಗ್ರಹ ಮತ್ತು ಸಂರಕ್ಷಿಸುವ ವಿಧಾನಗಳ ಬಗ್ಗೆ ತಿಳಿಸಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಪೂರ್ಣಪ್ರಮಾಣದಲ್ಲಿ ಈ ಪತ್ರಾಗಾರಗಳ ಉಪಯೋಗ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ದಾಖಲೆಗಳನ್ನು ಸಂರಕ್ಷಿಸುತ್ತಿರುವ ರಾಜ್ಯ ಪತ್ರಾಗಾರ ಇಲಾಖೆಯ ಪಾತ್ರ ಗಣನೀಯವಾದುದ್ದು ಎಂದರು.
ಈ ಸಂದರ್ಭದಲ್ಲಿ ಮೈಸೂರಿನ ವಿಭಾಗೀಯ ಪತ್ರಾಗಾರ ಕಚೇರಿಯ ಸಿಬ್ಬಂದಿ, ಜೆಎಸ್‍ಎಸ್ ಕಾಲೇಜಿನ ವಿವಿಧ ವಿಭಾಗಗಳ ಅಧ್ಯಾಪಕ ಮತ್ತು ಅಧ್ಯಾಪಕೇತರರು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದ್ವಿತೀಯ ಬಿಎ ವಿದ್ಯಾರ್ಥಿನಿ.ಎಂ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎ.ಜಿ.ಧರ್ಮೇಶ, ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ.ಆರ್.ಸುಜಾತಾಕುಮಾರಿ, ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸುವರ್ಣ ಕಂಬಿ ಇದ್ದರು.