ಐತಿಹಾಸಿಕ ಕ್ಷೇತ್ರಗಳ ಪುನಶ್ಚೇನಕ್ಕೆ ಉಮಾಮಹಾದೇವನ್ ಸೂಚನೆ

ಮುಳಬಾಗಿಲು ನ ೨೧-ಕೋಲಾರ ಜಿಲ್ಲೆಯಲ್ಲಿ ಐತಿಹಾಸಿಕ ಪ್ರವಾಸಿ ಪುಣ್ಯ ಕ್ಷೇತ್ರಗಳು ಇದ್ದು ಇವುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸದ ಕಾರಣ ಅವಸಾನದ ಅಂಚಿನಲ್ಲಿ ಇದ್ದು ಅವುಗಳನ್ನು ಪುನಶ್ಚೇತನಗೊಳಿಸುವ ಮೂಲಕ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಮಾಡಬೇಕಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಮಹದೇವನ್ ತಿಳಿಸಿದರು.
ತಾಲೂಕಿನ ವಿರೂಪಾಕ್ಷಿ ಗ್ರಾಮದಲ್ಲಿರುವ ಐತಿಹಾಸಿಕ ವಿರೂಪಾಕ್ಷೇಶ್ವರ ದೇವಾಲಯಕ್ಕೆ ಶುಕ್ರವಾರ ಸಂಜೆ ಬೇಟಿ ನೀಡಿ ಪರಿಶೀಲಿಸಿ ದೇವಾಲಯದ ಆವರಣದಲ್ಲಿರುವ ಬೆಳೆದಿರುವ ಗಿಡಗಂಟಿಗಳು, ಅಭಿವೃದ್ಧಿ ಕಾಣದ ಕಲ್ಯಾಣಿಗಳನ್ನು ಗ್ರಾಮ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಸಹಯೋಗದಲ್ಲಿ ನರೇಗಾ ಯೋಜನೆಯಲ್ಲಿ ತಕ್ಷಣದಲ್ಲೇ ತೆಗೆದುಕೊಂಡು ಅಭಿವೃದ್ಧಿ ಪಡಿಸಬೇಕೆಂದು ಸೂಚಿಸಿ ದೇವಾಲಯದ ಗೋಪುರಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕಾಗಿದೆ, ಕೆಲವು ದಾನಿಗಳು ಅರಿವಿಲ್ಲದೆ ಸುಣ್ಣ ಬಣ್ಣ ಬಳಿಸುತ್ತಿರುವುದು ತಕ್ಷಣಕ್ಕೆ ನಿಲ್ಲಿಸಬೇಕು ಎಂದು ಸೂಚಿಸಿದರಲ್ಲದೆ ರಾಜ್ಯ ಸರ್ವೇಕ್ಷಣ ಇಲಾಖೆಯ ಅಧಿಕಾರಿ ಪೂರ್ಣಿಮ ರವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ವಿರೂಪಾಕ್ಷಿ ದೇವಾಲಯ ಐತಿಹಾಸಿಕವಾಗಿದ್ದು ಇದರ ಬಗ್ಗೆ ವಿಶೇಷವಾದ ಕಾಳಜಿ ವಹಿಸುವಂತೆ ಕೋರಿದರು.
ಜಿಲ್ಲಾಪಂಚಾಯಿತಿ ಸಿ.ಇ.ಒ. ಎಂ.ಆರ್.ರವಿಕುಮಾರ್ ಮಾತನಾಡಿ ವಿರೂಪಾಕ್ಷಿ ದೇವಾಲಯಕ್ಕೆ ಸೇರಿದ ಆಸ್ತಿ ೧೫೦ ಎಕರೆ ಇದೆ ಎಂಬ ಮಾಹಿತಿ ಇದೆಯಾದರೂ ಈಗಿರುವ ಮೂರು ಎಕರೆ ೩೮ ಗುಂಟೆ ವಿಸ್ತೀರ್ಣದ ದೇವಾಲಯದ ಸ್ಥಳದಲ್ಲಿ ಬೆಳೆದಿರುವ ಕಳೆಯನ್ನು ಸ್ವಚ್ಚ ಮಾಡಲು ನರೆಗಾ ಯೋಜನೆಯಲ್ಲಿ ಅನುದಾನವನ್ನು ಉಪಯೋಗಿಸಿಕೊಳ್ಳಲಾಗುವುದು, ಜೊತೆಗೆ ಮುಜರಾಯಿ, ಸರ್ವೇಕ್ಷಣ ಇಲಾಖೆ, ಜಿ.ಪಂ ಇಲಾಖೆಗಳ ಅನುದಾನಗಳನ್ನು ಬಳಸಿಕೊಂಡು ದೇವಾಲಯದ ಕಟ್ಟಡವನ್ನು ಹೊರತುಪಡಿಸಿ ಉಳಿದೆಲ್ಲಾ ಕಡೆ ಸ್ವಚ್ಚಗೊಳಿಸುವ ಕಾರ್ಯವನ್ನು ಮಾಡಲಾಗುವುದು ಕಟ್ಟಡದ ಬಗ್ಗೆ ರಾಜ್ಯ ಸರ್ವೇಕ್ಷಣ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದೊಂದಿಗೆ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ ಎಂದು ತಿಳಿಸಿದರು.
ತಹಶೀಲ್ದಾರ್ ಕೆ.ಎನ್.ರಾಜಶೇಖರ್, ಪ್ರವಾಸೋಧ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಸೌಮ್ಯ, ಆವಣಿ ಗ್ರಾ.ಪಂ ಆಡಳಿತಾಧಿಕಾರಿ ಡಿ.ಗಿರಿಜೇಶ್ವರಿದೇವಿ, ಮುಜರಾಯಿ ಆರ್.ಐ ಸಿ.ಚೆಲುವಸ್ವಾಮಿ, ಆವಣಿ ಹೋಬಳಿ ಆರ್.ಐ ಸಿ.ಸುಬ್ರಮಣಿ, ಗ್ರಾ.ಪಂ ಮಾಜಿ ಸದಸ್ಯ ವಿರೂಪಾಕ್ಷಿ ಮಾರಪ್ಪ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.