ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಕೆಂಪೇಗೌಡ ವಿಮಾನ ನಿಲ್ದಾಣ


ಬೆಂಗಳೂರು, ಜ.೧೧-ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವೂ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಏರ್ ಇಂಡಿಯಾದ ಎಲ್ಲಾ ಮಹಿಳಾ ಪೈಲಟ್‌ಗಳ ತಂಡ ಅತಿ ದೀರ್ಘ ಹಾರಾಟ ನಡೆಸಿ ಎಲ್ಲಾ ಮಹಿಳಾ ಪೈಲಟ್ ಸಾನ್ ಫ್ಲಾನ್ಸಿಸ್ಕೊದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

ನಾರ್ತ್ ಪೋಲ್ ಮೂಲಕ ೧೬ ಸಾವಿರ ಕಿಲೋ ಮೀಟರ್ ಹಾರಾಟ ನಡೆಸಿ ಬಂದು ಇಂದು ಇತಿಹಾಸ ಸೃಷ್ಟಿಸಿದ್ದು ಮಾತ್ರವಲ್ಲದೆ, ಅದರಲ್ಲಿದ್ದವರೆಲ್ಲರೂ ಮಹಿಳಾ ಪೈಲೆಟ್ ಗಳೆನ್ನುವುದು ಗಮನಾರ್ಹ.

ಈ ಕುರಿತು ಪ್ರತಿಕ್ರಿಯಿಸಿರುವ ಕ್ಯಾಪ್ಟನ್ ಜೊಯಾ ಅಗರ್ವಾಲ್, ಆ ವಿಮಾನ ಹಾರಾಟ ತಂಡದ ಭಾಗವಾಗಿದ್ದಕ್ಕೆ ನಮಗೆ ತೀವ್ರ ಸಂತಸವಿದೆ. ಈ ಮಾರ್ಗದಲ್ಲಿ ಹಾರಾಟ ನಡೆಸಿದ್ದರಿಂದ ೧೦ ಟನ್ ಇಂಧನ ಉಳಿಕೆಯಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಇನ್ನು, ಏರ್ ಇಂಡಿಯಾದ ಸಾನ್ ಫ್ಲಾನ್ಸಿಸ್ಕೊ-ಬೆಂಗಳೂರು ವಿಮಾನವನ್ನು ಮೊದಲ ಬಾರಿಗೆ ಹಾರಾಟ ನಡೆಸಿದ ಶಿವಾನಿ ಮನ್ಹಾಸ್, ನನಗೆ ಇದೊಂದು ಹೊಸ ಉತ್ಸಾಹಭರಿತ ಅನುಭವವಾಗಿತ್ತು. ಇಲ್ಲಿಗೆ ಬಂದು ಮುಟ್ಟಲು ಸುಮಾರು ೧೭ ಗಂಟೆ ಹಿಡಿಯಿತು ಎಂದು ನುಡಿದರು.

ಕೇಂದ್ರದ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಪುರಿ ಸಹ ಪ್ರತಿಕ್ರಿಯೆ ನೀಡಿ, ಏರ್ ಇಂಡಿಯಾದ ಮಹಿಳಾ ತಂಡ ಜಗತ್ತಿನ ಸುತ್ತ ಸುತ್ತುತ್ತಿದ್ದು, ನಮ್ಮ ನಾರಿ ಶಕ್ತಿ ಇತಿಹಾಸ ಸೃಷ್ಟಿಸಿದೆ ಎಂದು ಅವರು ಬಣ್ಣಿಸಿದ್ದಾರೆ.

ಅಲ್ಲದೆ, ಅಮೆರಿಕದ ಪೂರ್ವ ತೀರವಾದ ಸಾನ್ ಫ್ಲಾನ್ಸಿಸ್ಕೊದಿಂದ ದಕ್ಷಿಣ ಭಾರತಕ್ಕೆ ನೇರ ವಿಮಾನ ಹಾರಾಟ ನಡೆಸಿದ ಮೊದಲ ವಿಮಾನ ಇದಾಗಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.