
ಬೆಂಗಳೂರು, ಏ.೭- ಚೈತ್ರ ಪೌರ್ಣಿಮೆಯ ಬೆಳದಿಂಗಳಲ್ಲಿ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಶಕ್ತ್ಯೋತ್ಸವವು ಇಂದು ಸಂಪನ್ನಗೊಂಡಿತು. ಲಕ್ಷಾಂತರ ಜನರು ಕರಗವನ್ನು ಕಣ್ತುಂಬಿಕೊಂಡರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗಡೆಯವರು ಕರಗ ಶಕ್ತ್ಯೋತ್ಸವದ ಧಾರ್ಮಿಕ ವಿಧಿ-ವಿಧಾನಗಳಲ್ಲಿ ಭಾಗವಹಿಸಿದರು. ಇನ್ನೂ, ಈ ಬಾರಿಯೂ ಕರಗವನ್ನು ತಿಗಳ ಸಮುದಾಯದ ಅರ್ಚಕ ವಿ.ಜ್ಞಾನೇಂದ್ರ ಅವರು ಹೊತ್ತಿದ್ದು, ನೋಡುಗರ ಗಮನ ಸೆಳೆಯಿತು.
ಮೆರವಣಿಗೆಯಲ್ಲಿ ಸಾಗಿದ ವೀರಕುಮಾರರು ಕರಗಕ್ಕೆ ಭದ್ರತೆ ಒದಗಿಸಿದರು.ಭಕ್ತರು ಕೂಡ ದೈವಾಂಶ ಸಂಭೂತರಿಗೆ ವಂದಿಸುತ್ತಾ ಹೂವಿನ ಸುರಿಮಳೆಗೈದರು. ಗೋವಿಂದನ ನಾಮಸ್ಮರಣೆ ಮಾಡಿದರು.ತಡರಾತ್ರಿ ೨ ಗಂಟೆಗೆ ಹೊರಟ ಕರಗವು ತಿಗರಳಪೇಟೆ, ನಗರ್ತರಪೇಟೆ, ಕಬ್ಬನ್‌ಪೇಟೆ, ಗಾಣಿಗರ ಪೇಟೆ, ದೊಡ್ಡಪೇಟೆ ಸೇರಿದಂತೆ ನಾನಾ ಭಾಗಗಳಲ್ಲಿ ಇಂದು ಬೆಳಗಿನ ಜಾವದವರೆಗೆ ಸಾಗಿ ಭಕ್ತರನ್ನು ಪುನೀತಗೊಳಿಸಿತು.
ಇಂದು ಬೆಳಗ್ಗೆ ೯:೩೦ ಗಂಟೆ ವೇಳೆಗೆ ಮತ್ತೆ ಹಿಂದಿರುಗಿ ಮೂಲ ಸ್ಥಾನ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ದೇವಾಲಯಕ್ಕೆ ಕರಗ ತಲುಪಿತು.
ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳು, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ನೆರೆ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದತು. ಇನ್ನು ರಾತ್ರಿ ಪುರಾಣ ಕಥನ ಹಾಗೂ ಪೊಂಗಲ್ ಸೇವೆ ವಿಶೇಷವಾಗಿ ನಡೆಯಿತು. ಎಂದಿನಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಪೂಜಾ ಕೈಂಕರ್ಯಗಳು ಶ್ರದ್ಧಾ, ಭಕ್ತಿಯಿಂದ ನಡೆದವು.ವರ್ಷಕ್ಕೊಮ್ಮೆ ನಡೆಯುವ ಹೂವಿನ ಕರಗ ಉತ್ಸವ ನಗರ್ತಪೇಟೆಯ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು. ಸರ್ವ ಧರ್ಮಗಳ ಭಾವೈಕ್ಯತೆಯ ಸಂಗಮವಾಗಿರುವ ಅಕ್ಕಿಪೇಟೆ ರಸ್ತೆಯ ತವಕ್ಕಲ್ ಮಸ್ತಾನ್ ದರ್ಗಾ ಕೂಡ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿತ್ತು.ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯಂತೆ ಹೂವಿನ ಕರಗ ದರ್ಗಾದೊಳಕ್ಕೆ ಪ್ರವೇಶಿಸಿ ಮುಂದಕ್ಕೆ ಸಾಗಿತು.
ರಾತ್ರಿಯೆಲ್ಲಾ ಕಾಲ್ನಡಿಗೆ..!
ಕಳೆದ ಒಂದೆರಡು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಕರಗ ಶಕ್ತ್ಯೋತ್ಸವದಲ್ಲಿ ಭಾಗವಹಿಸಿದ್ದಾರೆ. ದೇಗುಲದ ಆವರಣದಲ್ಲಿ ಭಕ್ತರು ಕಿಕ್ಕಿರಿದು ನೆರೆದಿದ್ದರು. ತಿಗಳ ಸಮುದಾಯದ ಅರ್ಚಕರಾದ ವಿ.ಜ್ಞಾನೇಂದ್ರ ಅವರು ಸುಮಾರು ೪೦ ಕೆ.ಜಿ ತೂಕದ (ಬೆಳ್ಳಿ ಮಿಶ್ರಿತ ಲೋಹ) ಕಿರೀಟ ಹೊತ್ತು ರಾತ್ರಿಯಿಡಿ ವಿವಿಧ ರಸ್ತೆಗಳಲ್ಲಿ ಕಾಲ್ನಡಿಗೆಯಲ್ಲಿ ಸಾಗಿದರು.
ದೇವಾಲಯಗಳಲ್ಲಿ ಪೂಜೆ..!
ಉತ್ಸವದಲ್ಲಿ ನೆರೆದಿದ್ದ ಗಣ್ಯರಿಗೆ ದರ್ಶನ ಕೊಟ್ಟು, ನಿಂಬೆಹಣ್ಣಿನ ಪ್ರಸಾದ ನೀಡಿ, ದೇವಸ್ಥಾನದ ಮುಖ್ಯರಸ್ತೆಯಿಂದ ಹೊರಟ ಕರಗ ಸಮೀಪದ ಶ್ರೀಕೃಷ್ಣಸ್ವಾಮಿ ದೇವಸ್ಥಾನ, ಹಲಸೂರು ಪೇಟೆಯ ಆಂಜನೇಯ ಸ್ವಾಮಿ, ಶ್ರೀರಾಮ ಮತ್ತು ಶ್ರೀ ಪ್ರಸನ್ನ ಗಂಗಾಧರೇಶ್ವರ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿತು.
ನಗರ್ತಪೇಟೆಯ ವೇಣುಗೋಪಾಲ ಸ್ವಾಮಿ ದೇವಾಲಯದಿಂದ ಸಿದ್ದಣ್ಣ ಗಲ್ಲಿಯ ಭೈರೇದೇವರ ದೇವಾಲಯ, ಮಕ್ಕಳ ಬಸವಣ್ಣನ ಗುಡಿ ಮಾರ್ಗವಾಗಿ ಬಳೇಪೇಟೆಯ ಅಣ್ಣಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸ್ವೀಕರಿಸಿತು. ಇದೇ ವೇಳೆ ಭಾವೈಕ್ಯತೆಯ ಸಂಗಮವಾದ ಅರಳೇಪೇಟೆಯ ‘ಮಸ್ತಾನ್ ಸಾಬ್ ದರ್ಗಾಕ್ಕೆ ಭೇಟಿ ನೀಡಿ, ಪೂಜೆ ಸ್ವೀಕರಿಸಿ ನಂತರ ಕರಗ ಉತ್ಸವ ತೆರಳುವುದು ವಾಡಿಕೆ. ಅದರಂತೆ ಈ ಬಾರಿಯೂ ಶಾಸ್ತ್ರಬದ್ಧವಾಗಿಯೇ ನಡೆಯಿತು.