ಬೀದರ್: ಜು.31:ಐಡಿ ಕಾರ್ಡ್, ವಿಜಿಟಿಂಗ್ ಕಾರ್ಡ್ ತೋರಿಸಿ ಹಣ ಗೀಳುವ ಪತ್ರಕರ್ತರು ಹೆಚ್ಚಾಗಿ ಕಂಡು ಬರುತ್ತಿರುವುದು ಇಂದಿನ ಪ್ರಸ್ತುತ ಸನ್ನಿವೇಶಕ್ಕೆ ದೊಡ್ಡ ದುರಂತ ತಂದೊಡ್ಡುತ್ತಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ರವಿವಾರ ಬೀದರನ ಪ್ರತಾಪ ನಗರದ ಹತ್ತಿರವಿರುವ ಪತ್ರಿಕಾ ಭವನದಲ್ಲಿ ಜಿಲ್ಲಾ ಮತ್ತು ಪ್ರದೇಶಿಕ ಪತ್ರಿಕೆಗಳ ಸಂಪಾದಕರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ರಿ) ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರ ಇವರ ಸಂಯುಕ್ತಾಶ್ರದಲ್ಲಿ ಆಯೋಜಿಸಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಅವ್ಹಾನಿತರಾಗಿ ಮಾತನಾಡಿದ ಅವರು, ಆಡಳಿತದ ಗಂಧ ಗಾಳಿ ಗೊತ್ತಿಲದ ಪೊಳ್ಳು ಪತ್ರಕರ್ತರು ಹಣ ಗಳಿಕೆಗಾಗಿ ಪತ್ರಿಕಾ ರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ ಇದರಿಂದ ನೈಜ ಪರ್ತಕರ್ತರಿಗೆ ಅಪಾಯಗಳು ಎದುರಾಗುತ್ತಿವೆ ಎಂದರು.
ಇತ್ತಿಚೆಗೆ ಸರ್ಟಿಫಿಕೆಟ್ ತೋರಿಸಿ ಪರ್ತಕರ್ತ ಪರಿಚಯ ಮಾಡಿಕೊಳ್ಳುವ ಪ್ರವೃತ್ತಿ ಬೆಳೆದಿದೆ ಇದು ಬದಲಾಗಬೇಕು ತಾವು ಬರೆಯುವ ಲೇಖನಗಳಿಂದ ತಮ್ಮ ಪರಿಚಯವಾಗಬೇಕು ಎಂದರು.
ತಮ್ಮ ವೃತ್ತಿಯ ಬಗ್ಗೆ ಎಲ್ಲರಿಗೂ ಗೌರವವಿರಬೇಕು. ಈ ವೃತ್ತಿಯಿಂದ ಅಸಹಾಯಕರಿಗೆ ಹಾಗೂ ನೊಂದವರಿಗೆ ಧ್ವನಿಯಾಗಲು ಸಾಧ್ಯವಿದೆ ಇದನ್ನು ಬಿಟ್ಟು ತಮ್ಮ ಸ್ವ ಹಿತಾಶಕ್ತಿಗೆ ಕೆಲಸಮಾಡಬಾರದು. ಇತ್ತಿಚೆಗೆ ಪತ್ರಿಕಾ ರಂಗದಲ್ಲಿ ಅನೇಕ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ ಇವುಗಳನ್ನು ಸರಿಪಡಿಸಲು ಎಲ್ಲರೂ ಸೇರಿ ಶ್ರಮಿಸಬೇಕು. ಈಗ ಬೀದರನಲ್ಲಿ ಪತ್ರಿಕಾ ಭವನ ಚಾಲನೆಯಾಗಿದ್ದು ಪತ್ರಿಕಾ ಗೋಷ್ಠಿ ಸೇರಿದಂತೆ ಪತ್ರಕರ್ತ ಮಿತ್ರರ ಎಲ್ಲಾ ಕೆಲಸಗಳು ಇಲ್ಲಿಂದಲೇ ಅಚ್ಚುಕಟ್ಟಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ರಾಜ್ಯದ ಅರಣ್ಯ, ಪರಿಸರ ಹಾಗೂ ಜೀವಶಾಸ್ತ್ರ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಸಮಾರಂಭ ಉದ್ಘಾಟಿಸಿದರು. ಪೌರಾಡಳಿತ ಸಚಿವ ರಹಿಮ್ ಖಾನ್ ಅಧ್ಯಕ್ಷತೆ ವಹಿಸಿದರು. ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಹುಮನಾಬಾದ್ ಶಾಸಕ ಸಿದ್ದಲಿಂಗಪ್ಪ ಪಾಟೀಲ ಮಾತನಾಡಿದರು.
ವಿಧಾನ ಪರಿಷತ ಸದಸ್ಯ ರಘುನಾಥರಾವ ಮಲ್ಕಾಪುರೆ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ಶಿಲ್ಪಾ.ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್., ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಘದ ರಾಜ್ಯಾಧ್ಯಕ್ಷ ಜೆ.ಆರ್.ಕೆಂಚೆಗೌಡ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾ ಪ್ರಧಾನ ಕಾರ್ಯದರ್ಶಿ ಬಿ.ಸಿ. ಲೋಕೇಶ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ, ರಾಷ್ಟ್ರೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮದನಗೌಡ ವೇದಿಕೆ ಮೇಲಿದ್ದರು.
ಇದೇ ವೇಳೆ ಜೆ.ಕೆ ಕನ್ಸ್‍ಸ್ಟ್ರಕನ್ಸ್ ಸಂಸ್ಥಾಪಕ ಗುರುನಾಥ ಕೊಳ್ಳುರ್ ಅವರನ್ನು ಸನ್ಮಾನಿಸಲಾಯಿತು. ವಾರ್ತಾ ಇಲಾಖೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದು, ಮುಂದಿನ ತಿಂಗಳಲ್ಲಿ ನಿವೃತ್ತರಾಗಲಿರುವ ಬಿಂದುಸಾರ ಧನ್ನೂರ್ ಹಾಗೂ ಸಂಗೀತ ಕಲಾವಿದ ವೈಜಿನಾಥ ಸಜ್ಜನಶೆಟ್ಟಿ ಅವರನ್ನು ಗೌರವಿಸಲಾಯಿತು.
ಪತ್ರಕರ್ತರಾದ ದೀಪಕ ವಾಲಿ, ಎಸ್.ಎಸ್. ಖಾದ್ರಿ, ಗಂಧರ್ವ ಸೇನಾ, ಸಿದ್ರಾಮಯ್ಯ ಸ್ವಾಮಿ, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೇಟ್ಟಿ, ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಮುಖಂಡರಾದ ಬಸವರಾಜ ಜಾ¨ಶೆಟ್ಟಿ, ಬಸವರಾಜ ಧನ್ನೂರ ಸೇರಿದಂತೆ ಜಿಲ್ಲೆಯ ಹಾಗೂ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ ದೃಶ್ಯ ಮತ್ತು ಮುದ್ರಣ ಮಾಧ್ಯಮದ ಪತ್ರಕರ್ತರು ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಆರಂಭದಲ್ಲಿ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆ ಸಂಪಾದಕರ ಸಂಘದ ಜಿಲ್ಲಾಧ್ಯಕ್ಷ ಬಾಬು ವಾಲಿ ಪ್ರಾಸ್ತಾವಿಕ ಮಾತನಾಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಡಿ.ಕೆ ಗಣಪತಿ ಸ್ವಾಗತಿಸಿದರೆ, ಕ.ಕಾ.ಪಂ.ಸಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಸುರೇಶ ವಂದಿಸಿದರು.