ಐಟಿ ದಾಳಿ: ಸಿಬಿಐ ತನಿಖೆಗೆ ಬಿಎಸ್‌ವೈ ಆಗ್ರಹ

ಬೆಂಗಳೂರು, ಅ. ೧೬- ಆದಾಯ ತೆರಿಗೆ ದಾಳಿ ಸಂದರ್ಭದಲ್ಲಿ ಬೆಂಗಳೂರಿನ ಕೆಲ ಗುತ್ತಿಗೆದಾರರ ನಿವಾಸದಲ್ಲಿ ಕೋಟಿ ಕೋಟಿ ಹಣ ಪತ್ತೆಯಾದ ಪ್ರಕರಣವನ್ನು ಸಿಬಿಐ ಹಾಗೂ ಇಡಿ ತನಿಖೆಗೆ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರ ಮನೆಯಲ್ಲಿ ಹಣ ಪತ್ತೆಯಾದ ಪ್ರಕರಣವನ್ನು ಇಡಿ ಮತ್ತು ಸಿಬಿಐನಿಂದ ತನಿಖೆ ಮಾಡಿಸಿದರೆ ಸತ್ಯಾಂಶ ಹೊರ ಬರುತ್ತದೆ ಎಂದರು.
ಐಟಿ ದಾಳಿಯಲ್ಲಿ ಸಿಕ್ಕಿ ಬಿದ್ದಿರುವ ಹಣದ ಮೂಲ ಪತ್ತೆಹಚ್ಚಲು ತನಿಖೆ ಅಗತ್ಯ ಎಂದ ಅವರು, ಈ ಹಣವನ್ನು ಚುನಾವಣೆಗೆ ಸಂಗ್ರಹ ಮಾಡಿರುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರು ಆರೋಪಿಸಿದ್ದಾರೆ. ಹಾಗಾಗಿ ಈ ಬಗ್ಗೆ ಸಿಇಐ ಹಾಗೂ ಇ.ಡಿ. ತನಿಖೆ ಅವಶ್ಯ ಎಂದರು.
ವಿದ್ಯುತ್: ಸಂಕಷ್ಟದಲ್ಲಿ ರೈತರು
ನಿನ್ನೆ ರಾಯಚೂರು ಜಿಲ್ಲೆ ಪ್ರವಾಸದಲ್ಲಿದ್ದೆ. ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಮಳೆಯಾಗದೆ ತೊಂದರೆಯಲ್ಲಿದ್ದು, ಬೋರ್‌ವೆಲ್ ನೀರಿನಿಂದಲಾದರೂ ಬೆಳೆ ಉಳಿಸಿಕೊಳ್ಳೋಣ ಎಂದು ರೈತರು ಕಷ್ಟ ಬೀಳುತ್ತಿದ್ದಾರೆ. ಆದರೆ ಸರ್ಕಾರ ವಿದ್ಯುತ್ ಪೂರೈಸದ ಕಾರಣ ಬೆಳೆ ನಾಶವಾಗಿದೆ ಎಂದು ದೂರಿದರು.
ಸರ್ಕಾರ ಈ ಕೂಡಲೇ ಕೊನೆ ಪಕ್ಷ ಬೋರ್‌ವೆಲ್‌ಗಳಿಗಾದರೂ ವಿದ್ಯುತ್ ಕೊಡುವ ಕೆಲಸ ಮಾಡಬೇಕು. ಹೀಗೆ ಮಾಡಿದರೆ ರೈತರ ಬೆಳೆಯನ್ನು ಸ್ವಲ್ಪವಾದರೂ ಉಳಿಸಬಹುದು ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಬೇರೆ ಬೇರೆ ಹೆಸರಿನಲ್ಲಿ ಜನರನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ಅವರು ದೂರಿ, ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಯಾವುದೇ ಬರ ಪರಿಹಾರ ಕಾಮಗಾರಿಗಳು ಆರಂಭವಾಗಿಲ್ಲ. ಕೂಡಲೇ ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.