ಐಟಿ ದಾಳಿಯಿಂದ ಎದುರಿಸಲು ನಾವೇನೂ ಎಐಎಡಿಎಂಕೆ ಅಲ್ಲ: ಸ್ಟಾಲಿನ್ ಗುಡುಗು

ಅರಿಯಲೂರ್ , ಏ2-ಆದಾಯ ತೆರಿಗೆ ದಾಳಿ ಮೂಲಕ ಬೆದರಿಸಲು ನಾವೇನೂ ಎಐಎಡಿಎಂಕೆ ಅಲ್ಲ ಎಂದು ಡಿಎಂಕೆ ನಾಯಕ ಸ್ಟಾಲಿನ್‌ ಗುಡುಗಿದ್ದಾರೆ.

ತಮ್ಮ ಮಗಳು ಸೆಂಥಮರೈ ಅವರ ಮನೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ಪಕ್ಷಕ್ಕೆ ಅಂತಹ ವಿಧಾನಗಳ ಮೂಲಕ ಬೆದರಿಕೆ ಹಾಕಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

ಅರಿಯಲೂರಿನ ಜಯಂಕೊಂಡಂನಲ್ಲಿ ಇಂದು ಚುನಾವಣಾ ಪ್ರಚಾರ ನಡೆಸಿದ ಸ್ಟಾಲಿನ್, ಚೆನ್ನೈನ ನನ್ನ ಮಗಳ ಮನೆ ಮೇಲೆ ಐಟಿ ದಾಳಿ ನಡೆಯುತ್ತಿರುವ ವಿಷಯ ತಿಳಿಯಿತು. ಸುಮಾರು 100 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ ನಂತರ 30 ಐಟಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಎಐಎಡಿಎಂಕೆ ನಾಯಕರ ಕಚೇರಿಗಳ ಮೇಲೆ ಇದೇ ರೀತಿಯ ದಾಳಿಗಳನ್ನು ನಡೆಸಲಾಗಿದ್ದು, ಆ ಮೂಲಕ ಅವರು ನಮ್ಮ ಪಕ್ಷವನ್ನು ನಿಯಂತ್ರಿಸುತ್ತಿದ್ದಾರೆ ಎಂದು ಆರೋಪಿಸಿದರು.

ನಮಗೆ ಬೆದರಿಕೆ ಹಾಕಲು ಸಿಬಿಐ ಮತ್ತು ಐಟಿ ಇಲಾಖೆಯನ್ನು ಬಳಕೆ ಮಾಡುತ್ತಿದ್ದಾರೆ.ಈ ರೀತಿಯ ದಾಳಿಗಳ ಮೂಲಕ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ ಎಂದು ನಾನು ಮೋದಿಗೆ ಹೇಳಲು ಬಯಸುತ್ತೇನೆ. ನಾನು ತುರ್ತುಸ್ಥಿತಿ ಎದುರಿಸಿದ್ದೇನೆ. ಹೀಗಾಗಿ ನಿಮ್ಮ ಈ ದಾಳಿಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ತಿರುಗೇಟು ನೀಡಿದರು.