ಐಟಿಐ ಕೋರ್ಸ್‍ಗಳ ಎಸ್.ಸಿ.ವಿ.ಟಿ. ಪರೀಕ್ಷೆ: ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

ಕಲಬುರಗಿ,ನ.12:ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಐ.ಟಿ.ಐ. ಕೋರ್ಸ್‍ಗಳ ಎಸ್.ಸಿ.ವಿ.ಟಿ. ಲಿಖಿತ ಪರೀಕ್ಷೆಯು ಇದೇ ನವೆಂಬರ್ 12 ರಿಂದ 20 ರವರೆಗೆ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಕಲಬುರಗಿಯ ಐಟಿಐ (ಪುರುಷ) ಕಾಲೇಜಿನಲ್ಲಿ ಜರುಗಲಿದೆ.
ಈ ಪರೀಕ್ಷಾ ಸಮಯದಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲು 200 ಮೀಟರ್ ಪ್ರದೇಶದ ವ್ಯಾಪ್ತಿಯಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಡಾ. ವೈ.ಎಸ್. ರವಿಕುಮಾರ್ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ.
ಈ ಪರೀಕ್ಷೆಯನ್ನು ಶಾಂತಿಯುತ ಹಾಗೂ ಸುಸೂತ್ರವಾಗಿ ನಡೆಸಲು ಅನುಕೂಲವಾಗುವಂತೆ ಈ ಪರೀಕ್ಷಾ ಸಂದರ್ಭದಲ್ಲಿ ಸಂಬಂಧಪಟ್ಟ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯಕ್ತಿಗಳು ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ 200 ಮೀಟರ್ ಪ್ರದೇಶ ವ್ಯಾಪ್ತಿಯಲ್ಲಿ ಮೊಬೈಲ್ ಫೋನ್, ಬ್ಲ್ಯೂಟೂತ್ ಹಾಗೂ ವೈರ್‍ಲೆಸ್ ಸೆಟ್‍ಗಳು ಸೇರಿದಂತೆ ಮತ್ತಿತರ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ಉಪಯೋಗಿಸುವುದನ್ನು ನಿಷೇಧಿಸಲಾಗಿದೆ. ಅದೇ ರೀತಿ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯ 200 ಮೀಟರ್ ಪ್ರದೇಶದಲ್ಲಿನ ಎಲ್ಲ ಜಿರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆಯೂ ಅವರು ಆದೇಶಿಸಿದ್ದಾರೆ.