ಐಕ್ಯತೆಗಾಗಿ, ಹೋರಾಟಕ್ಕಾಗಿ, ಚಳುವಳಿಗಾಗಿ ಕಾರ್ಮಿಕರು ಕಟಿಬದ್ಧರಾಗುವ ದಿನ

ದಾವಣಗೆರೆ ಮೇ 1 – ವಿಶ್ವ ಕಾರ್ಮಿಕರ ದಿನಾಚರಣೆ ಎಂದೊಡನೆಯೇ 8 ಘಂಟೆಯ ಕೆಲಸದ ಅವಧಿಯ ಬೇಡಿಕೆಯನ್ನು ಮುಂದಿಟ್ಟುಕೊಂಡು 1886 ರ ಮೇ ಒಂದರಂದು ಅಮೇರಿಕಾದ ಚಿಕಾಗೋದ ಇಲಿನಾಯ್ಸ್ ಪ್ರದೇಶದಲ್ಲಿ ಎಡಪಂಥೀಯ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಲಕ್ಷಾಂತರ ಸಂಖ್ಯೆಯ ಕಾರ್ಮಿಕರು ನಡೆಸಿದ ಅಭೂತಪೂರ್ವ ಹೋರಾಟವು ನೆನಪಿಗೆ ಬರುತ್ತದೆ. ದಿನದ 24 ಘಂಟೆ ಪೂರ್ತಿ ಮಾಲೀಕರ ಕಾರ್ಖಾನೆಗಳಲ್ಲಿ ದುಡಿಯಬೇಕಾಗಿದ್ದ ಕೆಲಸಗಾರರು ವಿಶ್ರಾಂತಿ, ಕೌಟುಂಬಿಕ ಜೀವನ ಹಾಗೂ ಸಾಮಾಜಿಕ ಜೀವನದಿಂದ ವಂಚಿತರಾಗಿದ್ದರು. 19 ನೇ ಶತಮಾನವು ಅಮೇರಿಕಾ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಕೈಗಾರಿಕಾ ಕ್ರಾಂತಿಗೆ ಸಾಕ್ಷಿಯಾಗಿದ್ದ ಪರಿಣಾಮವಾಗಿ ಅಸಂಖ್ಯಾತ ಉದ್ಯೋಗ ಸೃಷ್ಟಿಗೆ ಕಾರಣೀಭೂತವಾಗಿದ್ದರೂ ಸಹ  ಕಾರ್ಮಿಕರ ಬದುಕು ಮಾತ್ರ ಅತ್ಯಂತ ನಿಕೃಷ್ಟವಾದ ಸ್ಥಿತಿಯಲ್ಲಿತ್ತು. ಕಾರ್ಮಿಕರಿಗೆ ಕನಿಷ್ಠ ಸೌಲಭ್ಯವೂ ಸಿಗುತ್ತಿರಲಿಲ್ಲ. ಪ್ರಾಣಿಗಳ ರೀತಿ ಕಾರ್ಮಿಕರನ್ನು ನಡೆಸಿಕೊಳ್ಳಲಾಗುತಿತ್ತು. ಕಾರ್ಮಿಕರ ಶ್ರಮ, ಬೆವರು ಮಾಲೀಕರ ಖಜಾನೆ ತುಂಬಿಸುತಿತ್ತೇ ಹೊರತು ಲಾಭದ ಒಂದಂಶವೂ ಕಾರ್ಮಿಕರಿಗೆ ತಲುಪುತ್ತಿರಲಿಲ್ಲ‌. ಮೂಲಭೂತ ಸೌಕರ್ಯ, ವೈದ್ಯಕೀಯ, ಶಿಕ್ಷಣ ಸೌಲಭ್ಯಗಳಂತೂ ಮರೀಚಿಕೆಯಾಗಿತ್ತು. ಕಾರ್ಮಿಕರ ಹಿತ ರಕ್ಷಣೆಯ ಯಾವುದೇ ಕಾನೂನುಗಳು, ಒಪ್ಪಂದಗಳು ಇರದಿದ್ದ ಕಾಲವದು. ಅಂತಹ ಪ್ರತಿಕೂಲದ ಕಾಲಘಟ್ಟದಲ್ಲಿ ಕಾರ್ಮಿಕರನ್ನು ಸಂಘಟಿಸಿ, ಒಗ್ಗೂಡಿಸಿ, ಹೋರಾಟಕ್ಕೆ ಅಣಿಗೊಳಿಸಿ 1986 ರ ಮೇ ನಲ್ಲಿ  ನಡೆಸಿದ ಹೋರಾಟ ಚಾರಿತ್ರಿಕವಾಗಿ ದಾಖಲಾಯಿತು. ಅದೊಂದು ಸಾಮಾನ್ಯ ಹೋರಾಟವಾಗಿರಲಿಲ್ಲ‌. ರಕ್ತ ಕ್ರಾಂತಿಯೇ ಆಯಿತು. ಹೋರಾಟವನ್ನು ಧಮನಿಸಲು ಮಾಲೀಕವರ್ಗದಿಂದ ವಾಮಮಾರ್ಗದ ಅನೇಕ ಕ್ರೂರವಾದ ಪ್ರಯತ್ನಗಳು ನಡೆದವು. ಕಾರ್ಮಿಕರ ಮೇಲೆ ದಾಳಿ ಮಾಡಿಸಲಾಯಿತು‌.  ಕಾರ್ಮಿಕ ಸಂಘಟನೆಗಳು ಎದೆಗುಂದಲಿಲ್ಲ‌. ಕಾರ್ಮಿಕರು ಹಿಂದಡಿಯಿಡಲಿಲ್ಲ.ಕೊನೆಗೂ ಹೋರಾಟ, ತ್ಯಾಗ, ಬಲಿದಾನದ ಫಲವಾಗಿ ಕಾರ್ಮಿಕರ ಹೋರಾಟವು ವಿಜಯದಲ್ಲಿ ಅಂತ್ಯಗೊಂಡಿತು. ನ್ಯಾಯಯುತ ಬೇಡಿಕೆಯಾದ ಕಾರ್ಮಿಕರಿಗೆ ದಿನದ 8 ಘಂಟೆಯ ಕೆಲಸದ ಅವಧಿ ಜಾರಿಗೆ ಬಂತು. 8 ಘಂಟೆ ಕೆಲಸ – 8 ಘಂಟೆ ಸಾಮಾಜಿಕ ಜೀವನ – 8 ಘಂಟೆ ವಿಶ್ರಾಂತಿ ಎಂಬ ಪರಿಕಲ್ಪನೆಯು ವಿಶ್ವದಾದ್ಯಂತ ಜಾರಿಯಾಯಿತು. ಕಾರ್ಮಿಕರನ್ನು ಸಂಘಟಿಸಿ ಹೋರಾಟವನ್ನು ರೂಪಿಸಿ ವಿಜಯವನ್ನು ತಂದುಕೊಟ್ಟ ಕೀರ್ತಿ ಎಡಪಂಥೀಯ ‌ಕಾರ್ಮಿಕ ಸಂಘಟನೆಗಳಿಗೆ ಸಲ್ಲುತ್ತದೆ ಎನ್ನುವುದು ಇಲ್ಲಿ ಗಮನಾರ್ಹವಾಗಿದೆ. ಹೋರಾಟ ನಡೆದ ಸ್ಥಳವಾದ ಚಿಕಾಗೋ ನಗರಿಯ ಇಲಿನಾಯ್ಸ್ ಪ್ರದೇಶದ ಹೇ ಮಾರ್ಕೆಟ್ ಚೌಕ ಇಂದಿಗೂ ಕಾರ್ಮಿಕರ ಬಲಿದಾನದ ದ್ಯೋತಕವಾಗಿ ಚಿರಸ್ಥಾಯಿಯಾಗಿ ಉಳಿದಿದೆ. ಈ ಚರಿತ್ರಾರ್ಹ ಹೋರಾಟದ ನೆನಪಿಗಾಗಿ ಪ್ರತೀ ವರ್ಷ ಮೇ ಒಂದನೇ ತಾರೀಕನ್ನು ವಿಶ್ವದಾದ್ಯಂತ “ಕಾರ್ಮಿಕ ದಿನಾಚರಣೆ”ಯನ್ನಾಗಿ ಆಚರಿಸಲು ನಿರ್ಧರಿಸಲಾಯಿತು. ಇದನ್ನು “ಮೇ ಡೇ”, “ಲೇಬರ್ ಡೇ” ಅನ್ನುವ ಹೆಸರಿನಿಂದಲೂ ಕರೆಯಲಾಗುತ್ತದೆ.
1886 ರಿಂದ ಆರಂಭಗೊಂಡು ಇಲ್ಲಿಯ ತನಕ ಅಸಂಖ್ಯಾತ ಕಾರ್ಮಿಕ ಚಳುವಳಿಗಳು ಮತ್ತು ಹೋರಾಟಗಳು ನಡೆದಿವೆ‌. ಅದೇ ರೀತಿಯಲ್ಲಿ ಕಾರ್ಮಿಕ ಸಂಘಟನೆಗಳೂ ಅಸಂಖ್ಯಾತ ಸಂಖ್ಯೆಯಲ್ಲಿವೆ‌. ನಿರಂತರವಾದ ಸಂಘಟನಾತ್ಮಕ ಕೆಲಸ, ನಿರಂತರ ಹೋರಾಟವೇ ಕಾರ್ಮಿಕ ಸಂಘಗಳ ಉಸಿರು. ಹೋರಾಟದ ಕಿಚ್ಚು ನಂದಿತು ಅಂತಾದರೆ ಕಾರ್ಮಿಕ ವರ್ಗದ ಸ್ಥಿತಿ 1886 ರ ಪೂರ್ವ ಪರಿಸ್ಥಿತಿಗೆ ಮರುಳುವುದರಲ್ಲಿ ಸಂಶಯವಿಲ್ಲ.  ಒಂದೆಡೆ ಇಲ್ಲಿ ತನಕ ಹೋರಾಟದ ಮೂಲಕ ಗಳಿಸಿರುವ ಸೌಲಭ್ಯಗಳನ್ನು ರಕ್ಷಿಸಿಕೊಳ್ಳುವ ಸವಾಲು, ಇನ್ನೊಂದೆಡೆ ಪಡೆಯಬೇಕಾಗಿರುವ ಸೌಲಭ್ಯಗಳಿಗಾಗಿ ಹೋರಾಟ. ಒಟ್ಟಿನಲ್ಲಿ “ಬದುಕಿಗಾಗಿ ಹೋರಾಟ – ಹೋರಾಟಕ್ಕಾಗಿ ಬದುಕು”. ಸರಕಾರಗಳು ಯಾವತ್ತಿಗೂ ಮಾಲೀಕರ ಪರವೇ ಇರುವುದರಿಂದ ಯಾವಾಗಲೂ ವಿರೋಧ ಪಕ್ಷದ ನೆಲೆಯಲ್ಲಿಯೇ ನಿಂತು ಹೋರಾಡಬೇಕಾದ ಅನಿವಾರ್ಯತೆಯೂ ಇದೆ. ಆಳುವ ಸರಕಾರಗಳನ್ನು ಸದಾ ಕಾಲ ವಿರೋಧಿಸಿಕೊಂಡೇ ಹೋರಾಡುವುದು ಸಂಘಟನೆಗಳಿಗೆ ನಿಜಕ್ಕೂ ಸವಾಲಿನ ಕೆಲಸ. ಪ್ರತಿಯೊಂದು ನ್ಯಾಯಯುತ ಬೇಡಿಕೆಗಳ ಈಡೇರಿಕೆಗೂ ಹೋರಾಟದ ಮೊರೆ ಹೋಗಬೇಕಾದ ಪರಿಸ್ಥಿತಿ ಇದೆ. ದೇಶದ ಅಭಿವೃದ್ಧಿಗೆ ಕಾರ್ಮಿಕರೂ ಕಾರಣ ಎನ್ನುವುದನ್ನು ಅರಿತುಕೊಂಡು ಅವರಿಗೆ ನ್ಯಾಯವಾಗಿ ಸಲ್ಲಬೇಕಾದ ಸೌಲಭ್ಯಗಳನ್ನು ನೀಡುವ ಉದಾರತೆ ಸರಕಾರ ನಡೆಸುವವರಿಗೆ ಇರಬೇಕಾದ್ದು ಅತ್ಯಗತ್ಯವಾಗಿದೆ‌.1991 ರ ನಂತರ ಬಂದ ಕೇಂದ್ರ ಸರಕಾರ ಜಾರಿಗೆ ತಂದ ಖಾಸಗಿಕರಣ, ಜಾಗತಿಕರಣ, ಉದಾರೀಕರಣದ ಕರಿನೆರಳು ಕಾರ್ಮಿಕವರ್ಗವನ್ನು ಹೈರಾಣಾಗಿಸಿವೆ. ಮಾಲೀಕರ ಒತ್ತಡದಿಂದಾಗಿ ಆಗಿಂದಾಗ್ಗೆ ಕಾರ್ಮಿಕರ ಕಾಯ್ದೆಗೆ ತಿದ್ದುಪಡಿಯನ್ನು ತರುವುದರ ಮೂಲಕ ಕಾರ್ಮಿಕರ ಪರವಾದ ಕಾನೂನುಗಳನ್ನು ದುರ್ಬಲಗೊಳಿಸಿವೆ. ಇದು ಕಾರ್ಮಿಕ ಸಂಘಟನೆಗಳಿಗೆ ಇನ್ನಷ್ಟು ಮುಳುವಾಗುತ್ತಿದೆ. ಸಂಸತ್ತಿನಲ್ಲಿ‌ ಕಾರ್ಮಿಕರ ಪರವಾಗಿ‌ ಮಾತನಾಡುವ ಜನಪ್ರತಿನಿಧಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದು ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತರಲು ಸಹಕಾರಿಯಾಗಿದೆ. ದೇಶದ ಅತ್ಯಂತ ದೊಡ್ಡ ಸಂಖ್ಯೆಯಲ್ಲಿರುವ ಕಾರ್ಮಿಕ ವರ್ಗ ರಾಜಕೀಯ ಶಕ್ತಿಯಾಗಿ ರೂಪಾಂತರಗೊಳ್ಳದಿರುವುದೇ ಇಂದಿನ ಕಾರ್ಮಿಕ ವಿರೋಧಿ ಆಡಳಿತಕ್ಕೆ ಕಾರಣವಾಗಿದೆ. ಕಾರ್ಮಿಕರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವುದು ಕೂಡಾ ಕಾರ್ಮಿಕ ಸಂಘಗಳಿಗೆ ಸವಾಲಿನ ಕೆಲಸವಾಗಿದೆ. ಈ ಸವಾಲನ್ನು ಅವರು ಯಶಸ್ವಿಯಾಗಿ ನಿರ್ವಹಿಸಿದಲ್ಲಿ ಮಾತ್ರ ಕಾರ್ಮಿಕ ವರ್ಗ ನೆಮ್ಮದಿಯ ಜೀವನ ಸಾಗಿಸುವ ವಾತಾವರಣ ಸೃಷ್ಟಿಯಾಗಬಹುದೇನೋ.
ಈ ಎಲ್ಲ ಸಮಸ್ಯೆ, ಸವಾಲುಗಳ ನಡುವೆಯೇ ಇನ್ನೊಂದು ಮೇ ಡೇ ಬಂದಿದೆ. ಕಳೆದ ವರ್ಷ ಮತ್ತು ಈ ವರ್ಷ ಕೋವಿಡ್19 ಸಾಂಕ್ರಾಮಿಕ ಕಾಯಿಲೆಯ ಪರಿಣಾಮವಾಗಿ ವಿಶ್ವದಾದ್ಯಂತ “ವಿಶ್ವ ಕಾರ್ಮಿಕರ ದಿನಾಚರಣೆ”ಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಾಧ್ಯವಾಗುತ್ತಿಲ್ಲ. ಕಾರ್ಮಿಕರು ಒಂದೆಡೆ ಸೇರುವ ಹಾಗಿಲ್ಲ. ಮೆರವಣಿಗೆಯನ್ನು ನಡೆಸುವ ಹಾಗಿಲ್ಲ. ಸಾಮಾಜಿಕವಾಗಿ ದೈಹಿಕ ಅಂತರವನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದರಿಂದಾಗಿ ಶತಮಾನದ ಪರಂಪರೆಯಿರುವ ಮೇ ದಿನದ ಆಚರಣೆ ಸಪ್ಪಗಾಗಿದೆ. ಆದರೆ ಒಬ್ಬ ಪ್ರಜ್ಞಾವಂತ, ಜವಾಬ್ದಾರಿಯುತ ಮತ್ತು ನಿಷ್ಠಾವಂತ ಕಾರ್ಮಿಕ ತನ್ನ ಮನಸ್ಸಿನಲ್ಲಿಯೇ ಕಾರ್ಮಿಕ ವರ್ಗದ ಪ್ರಸ್ತುತ ಸನ್ನಿವೇಶ, ಮುಂದಿರುವ ಸಮಸ್ಯೆಗಳು ಸವಾಲುಗಳು, ಅದಕ್ಕೆ ತಕ್ಕನಾಗಿ ಭವಿಷ್ಯದಲ್ಲಿ ರೂಪಿಸಬೇಕಾದ ಹೋರಾಟ ಇವುಗಳ ಕುರಿತಾಗಿ ಚಿಂತನೆ ನಡೆಸಿ ತತ್ವ ಸಿದ್ದಾಂತಗಳ ಮೂಲಕ ಪ್ರಬಲ ಕಾರ್ಮಿಕ ಮುಖಂಡನಾಗಿ ಹೊರಹೊಮ್ಮಿ ಕಾರ್ಮಿಕ ವರ್ಗವನ್ನು ಮುನ್ನೆಡೆಸುವ ಪ್ರತಿಜ್ಞೆಯನ್ನು ಮಾಡುವ ಮೂಲಕ ಕಾರ್ಮಿಕ ದಿನವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿಕೊಳ್ಳಬಹುದಾಗಿದೆ. 
ಕೊರೋನಾ ಇದೆ ಅಂದ ಮಾತ್ರಕ್ಕೆ ಕಾರ್ಮಿಕರು ತಮ್ಮ ಬದುಕನ್ನು ಕಟ್ಟಿಕೊಳ್ಳುವುದನ್ನು ನಿಲ್ಲಿಸಲಾಗದು. ಜೊತೆಗೆ ಸಂಘಟನೆ, ಹೋರಾಟ, ಚಳುವಳಿಗಳು ಎಲ್ಲವೂ ಸಾಗಬೇಕು..‌ ಹಾಗಾಗಿಯೇ “ಬದುಕಿಗಾಗಿ ಹೋರಾಟ – ಹೋರಾಟಕ್ಕಾಗಿ ಬದುಕು”.
ಕೆ.ರಾಘವೇಂದ್ರ ನಾಯರಿಕಾರ್ಮಿಕ ಮುಖಂಡರುದಾವಣಗೆರೆ