ಐಐಟಿ ಹೋರಾಟದಲ್ಲಿ ಪಾಲ್ಗೊಂಡ ಬಹುತೇಕ ಮುಖಂಡರು, ಹೋರಾಟಗಾರರು ಕಣ್ಮರೆ

ಏಮ್ಸ್ ಹೋರಾಟದಿಂದ ದೂರ ಉಳಿಯುವಂತೆ ಪಕ್ಷದ ನಾಯಕರಿಗೆ ಬಿಜೆಪಿ ಪ್ರಭಾವಿ ಮುಖಂಡರ ಸೂಚನೆ

 • ರಾಯಚೂರು.ಮೇ.೧೪- ಪ್ರಾದೇಶಿಕ ಅಸಮಾತೋಲನಾ ನಿವಾರಣೆಗೆ ಜಿಲ್ಲೆಗೆ ಏಮ್ಸ್ ನೀಡುವ ಹೋರಾಟ ನಿನ್ನೆಯಿಂದ ಆರಂಭಗೊಂಡಿದ್ದು, ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಏಮ್ಸ್ ಹೋರಾಟ ಸಮಿತಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಆರಂಭಿಸಿದೆ. ಆದರೆ, ಐಐಟಿ ಹೋರಾಟದ ಮಾದರಿಯಲ್ಲಿ ಇದರ ಆರಂಭ ಕಾಣದಿರುವುದು ಗಮನಾರ್ಹವಾಗಿದೆ.
  ಏಮ್ಸ್ ಜಿಲ್ಲೆಯಲ್ಲಿ ಸ್ಥಾಪಿಸುವಂತೆ ಮಾಡಲು ಪಕ್ಷಾತೀತ ಹೋರಾಟದಿಂದ ಮಾತ್ರ ಸಾಧ್ಯ. ಅದರಲ್ಲಿ ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಹಾಗೂ ವಿವಿಧ ಜನಪ್ರತಿನಿಧಿಗಳು ಒಂದೇ ವೇದಿಕೆ ಮೇಲೆ ಬರುವ ಅಗತ್ಯವಿದೆ. ಈ ಹಿಂದೆ ಐಐಟಿಗಾಗಿ ನಡೆದ ಹೋರಾಟ ಜಿಲ್ಲೆಯಲ್ಲಿ ಭಾರೀ ಗಮನ ಸೆಳೆದಿತ್ತು. ರಾಜ್ಯ ಸರ್ಕಾರ ಈ ಹೋರಾಟದಿಂದ ವಿಚಲಿತಗೊಳ್ಳುವಂತಾಗಿತ್ತು. ಆದರೆ, ದುರಂತವೆಂದರೇ, ಏಮ್ಸ್ ಹೋರಾಟದಲ್ಲಿ ಈ ರೀತಿಯ ಪಾಲ್ಗೊಳ್ಳುವಿಕೆ ಕಾಣದೇ ಇರುವುದರ ಹಿಂದಿನ ರಾಜಕೀಯ ತಂತ್ರವೇನು?.
  ಬಿಜೆಪಿ ಅಧಿಕೃತ ಮೂಲಗಳನ್ವಯ ನಿನ್ನೆಯಿಂದ ಆರಂಭಗೊಂಡ ಏಮ್ಸ್ ಅನಿರ್ದಿಷ್ಟ ಧರಣಿ ಸತ್ಯಾಗ್ರಹದಲ್ಲಿ ಬಿಜೆಪಿಯ ಯಾರು ಪಾಲ್ಗೊಳ್ಳದಂತೆ ಪ್ರಭಾವಿ ಮುಖಂಡರೊಬ್ಬರು ಬಹುತೇಕ ಜನರಿಗೆ ದೂರವಾಣಿ ಕರೆ ಮಾಡಿ, ಹೇಳಿದ್ದಾರೆ ಎನ್ನುವುದು ತಿಳಿದು ಬಂದಿದೆ. ಈ ಹಿಂದೆ ಐಐಟಿ ಹೋರಾಟದ ಸಂದರ್ಭಗಳಲ್ಲಿ ಸಕ್ರಿಯ ಪಾತ್ರ ವಹಿಸಿದ ಈ ಪ್ರಭಾವಿ ನಾಯಕರು ಮತ್ತು ಪ್ರತಿಭಟನಾ ಹೋರಾಟಗಾರರು ಈಗ ಏಮ್ಸ್ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಹತ್ತಿರಕ್ಕೂ ಸುಳಿಯದಿರುವುದು ಗಮನಾರ್ಹವಾಗಿದೆ.
  ಐಐಟಿ ಹೋರಾಟದ ಸಂದರ್ಭದಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಐಐಟಿಯನ್ನು ರಾಜಕೀಯ ಅಸ್ತ್ರವಾಗಿಸಿಕೊಂಡ ಬಿಜೆಪಿ ಮುಖಂಡರಿಗೆ ಈಗ ಏಮ್ಸ್ ತಮ್ಮದೇ ಸರ್ಕಾರದ ವಿರುದ್ಧ ಅಸ್ತ್ರವಾಗುವ ಆತಂಕದ ಹಿನ್ನೆಲೆಯಲ್ಲಿ ಹೋರಾಟ ತೀವ್ರಗೊಳಿಸಿದ್ದಾರೆ. ಆದರೆ, ಕಾಂಗ್ರೆಸ್, ಬಿಜೆಪಿ, ಆಮ್ ಆದ್ಮಿ ಪಕ್ಷ ಸೇರಿದಂತೆ ಇತರೆ ಪ್ರಗತಿ ಪರ ಸಂಘಟನೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಏಮ್ಸ್ ಹೋರಾಟದಲ್ಲಿ ರಾಜಕೀಯ ಚಳಿ ಬಿಟ್ಟು ಮುಂದಾಗದಿರುವುದು ಅನೇಕ ಅನುಮಾನಗಳಿಗೆ ದಾರಿ ಮಾಡಿದೆ.
  ನಗರದಲ್ಲಿ ಪ್ರಭಾವಿ ಬಿಜೆಪಿ ನಾಯಕರ ಹಿಡಿತದಲ್ಲಿ ಪ್ರಗತಿಪರ ಹೋರಾಟಗಾರರು ಇದ್ದಾರೆಯೇ? ಎಂದು ಜನ ಪ್ರಶ್ನಿಸುವಂತೆ ಮಾಡಿದೆ. ಏಮ್ಸ್‌ಗೆ ಸಂಬಂಧಿಸಿ ಇಲ್ಲಿವರೆಗೆ ಹತ್ತು, ಹಲವು ಹೇಳಿಕೆ ನೀಡಿದಂತಹ ಜನ ಅನಿರ್ದಿಷ್ಟದ ಧರಣಿ ಸತ್ಯಾಗ್ರಹ ಆರಂಭಗೊಂಡ ನಂತರ ಕಾಣೆಯಾಗುತ್ತಿರುವುದರ ಹಿಂದೆ ಯಾರ ಪ್ರಭಾವವಿದೆ?. ಈ ರೀತಿಯ ನಿನ್ನೆಯಿಂದ ಏಮ್ಸ್ ಹೋರಾಟ ಆರಂಭಗೊಂಡಿರುವುದರಿಂದ ಇದರ ತೀವ್ರತೆ ತಿಳಿಯಲು ಇನ್ನೂ ಕಾಲಾವಕಾಶ ಅಗತ್ಯ ಎನ್ನುವುದರಲ್ಲಿ ಅನುಮಾನವಿಲ್ಲ.
  ಆದರೆ, ಬಿಜೆಪಿ ಒಬ್ಬ ಪ್ರಭಾವಿ ಮುಖಂಡರು ಬಹುತೇಕ ಅವರ ಪಕ್ಷ ಮತ್ತು ಸಂಪರ್ಕದಲ್ಲಿರುವ ಹೋರಾಟಗಾರರಿಗೆ ಏಮ್ಸ್ ಹೋರಾಟದಲ್ಲಿ ಪಾಲ್ಗೊಳ್ಳದಿರುವಂತೆ ಸೂಚಿಸಿದ್ದರಿಂದ ಏಮ್ಸ್ ಹೋರಾಟ ತೀವ್ರತೆ ಪಡೆಯಲು ಮತ್ತೊಂದಿಷ್ಟು ಕಾಲಾವಕಾಶ ಪಡೆಯುವ ಸಾಧ್ಯತೆಗಳಿದ್ದು, ಏಮ್ಸ್ ಹೋರಾಟದಿಂದ ಬಿಜೆಪಿ ಪಕ್ಷಕ್ಕೆ ಉಂಟಾಗುವ ಮುಜುಗರ ತಡೆಯಲು ತೆರೆಮರೆಯಲ್ಲಿ ಈ ಪ್ರಯತ್ನಗಳು ನಡೆದಿದ್ದು, ಈ ರೀತಿಯ ಅಡ್ಡಿಗಳನ್ನು ನಿವಾರಿಸಿಕೊಂಡು ಹೋರಾಟ ಸಮಿತಿ ರಾಜ್ಯ ಮತ್ತು ಕೇಂದ್ರ ಗಮನ ಸೆಳೆಯುವ ಬೃಹತ್ ಹೋರಾಟದತ್ತ ಸಾಗಲಿದೆಯೇ? ಎನ್ನುವುದು ಕಾದು ನೋಡಬೇಕಾಗಿದೆ.