ಐಐಟಿ ವಿದ್ಯಾರ್ಥಿಗೆ ಆರ್ಥಿಕ ನೆರವು

ಹುಲಸೂರ:ಡಿ.26: ಸರ್ಕಾರಿ ಐಐಟಿ ಸೀಟು ಪಡೆದ ವಿದ್ಯಾರ್ಥಿಗೆ ಊಟ, ವಸತಿ ಸೌಲಭ್ಯ ಹಾಗೂ ಕಲಿಕಾ ಪರಿಕರಗಳ ಖರೀದಿಗಾಗಿ ಸೋಮವಾರ ಇಲ್ಲಿನ ಬಿಜೆಪಿ ಯುವ ಮುಖಂಡ ಶರಣು ಸಲಗರ ಅವರು ವೈಯಕ್ತಿಕವಾಗಿ 21,000 ರೂ. ಆರ್ಥಿಕ ನೆರವು ನೀಡಿದ್ದಾರೆ.

ಭಾಲ್ಕಿ ತಾಲ್ಲೂಕಿನ ಶಿವಣಿ ಗ್ರಾಮ ಮೂಲದ ಮಲ್ಲಿಕಾರ್ಜುನ್ ತಂದೆ ಪ್ರಕಾಶ್ ಭಾತಂಬ್ರೆ ಎಂಬಾತ ವಿದ್ಯಾರ್ಥಿಯು ಉತ್ತರ ಪ್ರದೇಶ ರಾಜ್ಯದ ವಾರಾಣಾಸಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯಲ್ಲಿ ಇತ್ತೀಚೆಗೆ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಕೋರ್ಸ್‍ನ ಸರ್ಕಾರಿ ಸೀಟು ಪಡೆದಿದ್ದಾನೆ. ಆದರೆ, ಈತನ ಕುಟುಂಬ ತೀರಾ ಕಡುಬಡವಾಗಿದ್ದು, ಈತನಿಗೆ ಐಐಟಿ ಕಲಿಕಾ ಪರಿಕರಗಳನ್ನು ಖರೀದಿಸಿ ಕೊಡುವ ಹಾಗೂ ಊಟ, ವಸತಿ ಸೌಲಭ್ಯ ನೀಡುವ ಸ್ಥಿತಿಯಲ್ಲಿ ಇಲ್ಲ. ಹುಲಸೂರನಲ್ಲಿರುವ ನೆಂಟರ ಮನೆಗೆ ವಿದ್ಯಾರ್ಥಿ ಮಲ್ಲಿಕಾರ್ಜುನ್ ಆಗಮಿಸಿದ್ದಾನೆ ಎಂದು ತಿಳಿದ ಅವನ ಗೆಳೆಯರ ಬಳಗ ಸೋಮವಾರ ಶರಣು ಸಲಗರ ಅವರಿಗೆ ಕರೆ ಮಾಡಿ ಮಲ್ಲಿಕಾರ್ಜುನ್‍ನಿಗೆ ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿದೆ.

ಇದಕ್ಕೆ ಸ್ಪಂದಿಸಿದ ಶರಣು ಸಲಗರ ಅವರು ಸೋಮವಾರ ಕೂಡಲೇ ಹುಲಸೂರಿಗೆ ಬಂದು ವಿದ್ಯಾರ್ಥಿ ಮಲ್ಲಿಕಾರ್ಜುನ್‍ನಿಗೆ 21,000 ರೂ.ಗಳುಳ್ಳ ಚೆಕ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಕಾರ್ಯದರ್ಶಿ ಸೋಮನಾಥ ನಂದಗೆ, ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ನಾಗೇಶ್ ಮೇತ್ರೆ, ಸಂಗಮೇಶ್ ಭೋಪಳೆ, ಗ್ರಾಪಂ ಸದಸ್ಯ ಅರವಿಂದ್ ಹರಪಲ್ಲೆ, ಹುಲಸೂರ ಗ್ರಾಪಂ ಮಾಜಿ ಅಧ್ಯಕ್ಷ ರಘುನಾಥ ಮೇತ್ರೆ, ಅಜ್ಜಿ ಲಕ್ಷ್ಮಿಬಾಯಿ ಮೇತ್ರೆ, ಸಚಿನ್ ವಗ್ಗೆ, ದೇವಿಂದ್ರ ಭೋಪಳೆ, ಶ್ರೀಕಾಂತ್ ಕೌಟೆ, ಪ್ರಕಾಶ್ ಮಂಗಾ, ದತ್ತು ಅಲಗೂಡಕರ್, ಸಿದ್ರಾಮ ಪಾರೆಶೆಟ್ಟೆ, ಪ್ರದೀಪ್ ಮೇತ್ರೆ, ಪಂಡಿತ ವಗ್ಗೆ ಇನ್ನಿತರರಿದ್ದರು.