ಐಐಟಿ ಮಾದರಿಯಲ್ಲಿ 7 ಕೆಐಟಿ ಗಳ ಸ್ಥಾಪನೆ: ಸಿಎಂ

ಬೆಂಗಳೂರು, ಸೆ. ೨೧- ಐಐಟಿ ಮಾದರಿಯಲ್ಲಿ ರಾಜ್ಯದಲ್ಲಿ ಮುಂದಿನ ಐದು ವರ್ಷಗಳಲ್ಲಿ ೭ ಕರ್ನಾಟಕ ತಂತ್ರಜ್ಞಾನ ಇನ್ಸ್ಟಿಟ್ಯೂಟ್ (ಕೆಐಟಿ)ಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇಂದಿನಿಂದ ೨೩ರವರೆಗೆ ಮೂರು ದಿನಗಳ ಕಾಲ ಇಂಡಿಯಾ ಡೈಡ್ಯಾಕ್ಟಿಕ್ಸ್ ಅಸೋಸಿಯೇಷನ್ ಮತ್ತು ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಆಯೋಜನೆಗೊಳಿಸಿರುವ ಡೈಡ್ಯಾಕ್ ಇಂಡಿಯಾ ಹಾಗೂ ಏಶಿಯನ್ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ವಿಶ್ವ ಮಟ್ಟದಲ್ಲಿ ಭವಿಷ್ಯದಲ್ಲಿ ಶಿಕ್ಷಣ ವ್ಯವಸ್ಥೆ,ಗುಣಮಟ್ಟದ ಶಿಕ್ಷಣ ಕುರಿತಂತೆ ಈ ಸಮ್ಮೇಳನದಲ್ಲಿ ಭಾಗವಹಿಸಿರುವ ೨೦ ದೇಶಗಳ ಸಾವಿರಾರು ಶಿಕ್ಷಣ ತಜ್ಞರು, ಉದ್ಯಮಿಗಳು ಕಾರ್ಯಾಗಾರಗಳಲ್ಲಿ ಭಾಗವಹಿಸಿ ತಮ್ಮ ಅನುಭವಗಳ ಮೂಲಕ ಭವಿಷ್ಯದಲ್ಲಿ ಶಿಕ್ಷಣ ವ್ಯವಸ್ಥೆ ಹೇಗಿರಬೇಕು ಎಂಬ ಬಗ್ಗೆ ಚರ್ಚೆಗಳನ್ನು ನಡೆಸಿ ಆ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಕಲೆ ಹಾಕಿ ಈ ಒಂದು ಬೆಂಗಳೂರಿನ ಶಿಕ್ಷಣ ಸಮ್ಮೇಳನ ವಿಶ್ವ ಮಟ್ಟದಲ್ಲಿ ಮೈಲಿಗಲ್ಲಾಗಬೇಕು ಎಂದು ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ಮಕ್ಕಳ ಶಿಕ್ಷಣ ಸರಳವಾಗಿ ಅರ್ಥವಾಗುವಂತಿರಬೇಕು.ವ್ಯಾಸಂಗ ಅಂದರೆ ಮಕ್ಕಳು ಆಸಕ್ತಿ ವಹಿಸಿ ಕಲಿಯುವಂತಿರಬೇಕು ಎಂದ ಸಿಎಂ,ಉನ್ನತ ಶಿಕ್ಷಣ ವಿದ್ಯಾರ್ಥಿ ಆಯ್ಕೆ ಮಾಡಿಕೊಳ್ಳುವ ಬದುಕಿಗೆ ಹತ್ತಿರವಾಗಿರುವುದರಿಂದ ಉನ್ನತ ಶಿಕ್ಷಣ ಹೆಚ್ಚಿನ ಮಹತ್ವದ್ದಾಗಿರುತ್ತದೆ ಎಂದರಲ್ಲದೆ ಅನೇಕ ಶಿಕ್ಷಣ ಆಪ್‌ಗಳು ಬಂದಿವೆ.ಆದರೆಅವುಗಳಿಂದ ಹೆಚ್ಚಿನ ಪರಿಣಾಮಗಳೇನು ಕಂಡುಬಂದಿಲ್ಲ ಎಂದು ಅಭಿಪ್ರಾಯ ಪಟ್ಟರು.
ಭವಿಷ್ಯದ ಶಿಕ್ಷಣ ವಿಶ್ವ ಮಟ್ಟದಲ್ಲಿ ಗುರುತಿಸುವಂತಿರಬೇಕು ಎಂದ ಮುಖ್ಯಮಂತ್ರಿಗಳು,ಶಿಕ್ಷಣದಲ್ಲಿ ಮೊದಲು ಕಲಿಕೆ,ಆದರೆ ಜೀವನದಲ್ಲಿ ಮೊದಲು ಪರೀಕ್ಷೆ ಆಮೇಲೆ ಕಲಿಕೆ ಎಂದರು.
ವಿಶ್ವದ ನಾನಾ ದೇಶಗಳ ೪೦೦ ಸಂಶೋಧನೆ ಮತ್ತು ಅಭಿವೃದ್ಧಿ ಸೆಂಟರ್ಸ್ ಹೊಂದಿದ ವಿಶ್ವದ ಮೊದಲ ನಗರ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.
ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ಮಾತನಾಡಿದೇಶದ ಆರ್ಥಿಕತೆ,ಸದೃಢತೆ ಸೇರಿದಂತೆ ಎಲ್ಲದಕ್ಕೂ ಗುಣಮಟ್ಟದ ಶಿಕ್ಷಣವೇ ಪರಿಹಾರ ಎಂದು ಅಭಿಪ್ರಾಯ ಪಟ್ಟರು. ಸ್ಲೋಟನ್, ಗ್ಯಾವಿನ್ ಡೈಕ್ಸ್, ಸಲ್ಗಡೋ,ಆಲ್ಜೆನ್ಡಿ ವೇದಿಕೆಯಲ್ಲಿದ್ದರು.
ಡೈಡ್ಯಾಕ್ ಇಂಡಿಯಾ ಪ್ರದರ್ಶನ ಶಿಕ್ಷಣ ಕ್ಷೇತ್ರದಲ್ಲಿ ಜರುಗುವ ಏಷ್ಯಾದ ಅತೀ ದೊಡ್ಡ ಮತ್ತು ಭಾರತದ ಏಕೈಕ ಪ್ರದರ್ಶನ. ಮೈಕ್ರೋಸಾಫ್ಟ್, ಅಮೆಜಾನ್, ಸ್ಯಾಮ್ಸಂಗ್, ಎಚ್.ಪಿ. ಸೇರಿದಂತೆ ೨೦೦ಕ್ಕೂ ಹೆಚ್ಚು ಪ್ರದರ್ಶಕರು ಸುಮಾರು ೪,೦೦೦ ವಿವಿಧ ಉತ್ಪನ್ನಗಳು/ಸೇವೆಗಳನ್ನು ಈ ಸಮಾವೇಶದಲ್ಲಿ ಪ್ರಸ್ತುತ ಪಡಿಸಲಿದ್ದಾರೆ. ಈ ಸಮಾವೇಶದಲ್ಲಿ ಯುಕೆ, ಜರ್ಮನಿ, ಆಸ್ಟ್ರೇಲಿಯಾ, ಕೆನಡಾ, ಸಿಂಗಾಪೂರ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಪೆವಿಲಿಯನ್ ಗಳೂ ಸಹ ಪ್ರದರ್ಶನದಲ್ಲಿವೆ..