ಐಎಸ್ ಶಂಕಿತ ನಾಯಕನ ಹತ್ಯೆ

ಅಂಕಾರ (ಟರ್ಕಿ), ಮೇ ೧- ಟರ್ಕಿಯ ಪಡೆಗಳು ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಘಟನೆಯ ಶಂಕಿತ ನಾಯಕನನ್ನು ಹೊಡೆದುರುಳಿಸಿದೆ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಘೋಷಿಸಿದ್ದಾರೆ.
ಹತ್ಯೆಗೀಡಾದ ಐಎಸ್ ಶಂಕಿತ ನಾಯಕನನ್ನು ಅಬು ಹುಸೇನ್ ಅಲ್-ಖುರೇಷಿ ಎಂದು ಗುರುತಿಸಲಾಗಿದೆ. ಕಳೆದ ವರ್ಷವಷ್ಟೇ ಈತ ಸ್ಥಳೀಯ ಮಟ್ಟದಲ್ಲಿ ಅಧಿಕಾರ ವಹಿಸಿಕೊಂಡಿದ್ದ ಎನ್ನಲಾಗಿದೆ. ಟರ್ಕಿಯ ಎಂಐಟಿ ಗುಪ್ತಚರ ಸಂಸ್ಥೆಯು ಖುರೇಷಿಯನ್ನು ಹೊಡೆದುರುಳಿಸಿದೆ. ಖುರೇಷಿ ಚಲನವಲನಗಳ ಮೇಲೆ ಎಂಐಟಿ ಹಲವು ದಿನಗಳಿಂದ ದೃಷ್ಟಿ ಇಟ್ಟಿತ್ತು. ನಾವು ಯಾವುದೇ ತಾರತಮ್ಯವಿಲ್ಲದೆ ಭಯೋತ್ಪಾದಕ ಸಂಘಟನೆಗಳೊಂದಿಗೆ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಎರ್ಡೊಗನ್ ತಿಳಿಸಿದ್ದಾರೆ. ಇನ್ನು ಕಾರ್ಯಾಚರಣೆಯ ಬಗ್ಗೆ ಇಸ್ಲಾಮಿಕ್ ಸ್ಟೇಟ್ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇನ್ನು ಮೂಲಗಳ ಪ್ರಕಾರ ಟರ್ಕಿಯ ಗಡಿಗೆ ಹತ್ತಿರವಿರುವ ಉತ್ತರದ ಪಟ್ಟಣ ಜಂಡಾರಿಸ್‌ನಲ್ಲಿ ಸದ್ಯದ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ.