
ಕಾಬೂಲ್ (ಅಫ್ಘಾನಿಸ್ತಾನ), ಮಾ.೧೦- ಅಫ್ಘಾನಿಸ್ತಾನದ ಉತ್ತರ ಬಾಲ್ಖ್ ಪ್ರಾಂತ್ಯದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ತಾಲಿಬಾನ್ ಆಡಳಿತದ ಗವರ್ನರ್ ಮೃತಪಟ್ಟ ಘಟನೆ ನಡೆದಿದೆ. ಐಎಸ್ (ಇಸ್ಲಾಮಿಕ್ ಸ್ಟೇಟ್) ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ಮುಹಮ್ಮದ್ ದಾವೂದ್ ಮುಝಮ್ಮಿಲ್ ಅವರನ್ನು ಪ್ರಾಂತೀಯ ರಾಜಧಾನಿ ಮಝರ್-ಎ ಷರೀಫ್‌ನಲ್ಲಿರುವ ಅವರ ಕಚೇರಿಯಲ್ಲಿ ಗುರುವಾರ ಆತ್ಮಾಹುತಿ ದಾಳಿ ಮೂಲಕ ಹತ್ಯೆ ನಡೆಸಲಾಗಿದೆ. ರಾಜ್ಯಪಾಲರ ಕಚೇರಿಯ ಎರಡನೇ ಮಹಡಿಯಲ್ಲಿ ಗುರುವಾರ ಬೆಳಗ್ಗೆ ಸ್ಫೋಟ ಸಂಭವಿಸಿದೆ ಎಂದು ಬಾಲ್ಖ್ ಪೊಲೀಸ್ ವಕ್ತಾರ ಮುಹಮ್ಮದ್ ಆಸಿಫ್ ವಜಿರಿ ತಿಳಿಸಿದ್ದಾರೆ. ಮುಝಮ್ಮಿಲ್ ಅವರು ಈ ಹಿಂದೆ ನಂಗರ್‌ಹಾರ್ ಪ್ರಾಂತ್ಯದ ಗವರ್ನರ್ ಆಗಿ ಐಎಸ್ ವಿರುದ್ಧದ ಹೋರಾಟದ ನೇತೃತ್ವ ವಹಿಸಿದ್ದರು. ಅವರನ್ನು ಕಳೆದ ಅಕ್ಟೋಬರ್‌ನಲ್ಲಿ ಬಾಲ್ಖ್‌ಗೆ ಸ್ಥಳಾಂತರಿಸಲಾಗಿತ್ತು. ೨೦೨೧ರಲ್ಲಿ ತಾಲಿಬಾನ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಮುಹಮ್ಮದ್ ದಾವೂದ್ ಮುಝಮ್ಮಿಲ್ ಅವರು ಹತ್ಯೆಗೀಡಾದ ಅತ್ಯಂತ ಹಿರಿಯ ತಾಲಿಬಾನಿ ಅಧಿಕಾರಿಯಾಗಿದ್ದಾರೆ. ಇತ್ತೀಚಿಗಿನ ದಿನಗಳಲ್ಲಿ ದಾಳಿಗಳು ಕಡಿಮೆಯಾಗಿದ್ದರೂ ತಾಲಿಬಾನಿ ಪರ ಅಧಿಕಾರಿಗಳ ಮೇಲೆ ಐಎಸ್ ಉಗ್ರರು ದಾಳಿ ನಡೆಸಲು ಆರಂಭಿಸಿದ್ದಾರೆ. ಇನ್ನು ಘಟನೆಯ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್, ಇಸ್ಲಾಂನ ಶತ್ರುಗಳ ಸ್ಫೋಟದಲ್ಲಿ ರಾಜ್ಯಪಾಲರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.