ಐಎಸ್‌ಐ ವಿರುದ್ಧ ಜನಾಕ್ರೋಶ:

ಕರಾಚಿ, ನ.೪- ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ ನಡೆಸಿದ ಬಳಿಕ ಸದ್ಯ ದೇಶದಲ್ಲಿ ಗೃಹಯುದ್ದದ ಭೀತಿ ಎದುರಾಗಿದೆ. ಅಲ್ಲದೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ವಿರುದ್ಧ ಇದೀಗ ಸಾರ್ವಜನಿಕರು ಆಕ್ರೋಶ ಹೊರಹಾಕಲು ಆರಂಭಿಸಿದ್ದು, ಪ್ರತಿಭಟನೆ ಹಿಂಸಾರೂಪ ಪಡೆಯುವ ಎಲ್ಲಾ ಸಾಧ್ಯತೆಗಳಿವೆ.
ಇಮ್ರಾನ್ ವಿರುದ್ಧ ಗುಂಡಿನ ದಾಳಿಯ ಬಳಿಕ ಪಾಕಿಸ್ತಾನ ತೆಹ್ರೀಕ್ ಎ ಇನ್ಸಾಫ್ (ಪಿಟಿಐ) ಕಾರ್ಯಕರ್ತರ ಆಕ್ರೋಶ ಸಹಜವಾಗಿಯೇ ಬುಗಿಲೆದ್ದಿದೆ. ಅದರಲ್ಲೂ ನಿನ್ನೆ ತಡರಾತ್ರಿ ಪೊಲೀಸ್ ಇಲಾಖೆಗೆ ಸೇರಿದ ವಾಹನಗಳ ಮೇಲೆ ಪಿಟಿಐ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಅದರಲ್ಲೂ ಎಲ್ಲಕ್ಕಿಂತ ಮುಖ್ಯವಾಗಿ ಇದೀಗ ಪಾಕಿಸ್ತಾನದ ಬೆನ್ನೆಲುಬುಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಐಎಸ್‌ಐ ವಿರುದ್ಧ ಕೂಡ ಆಕ್ರೋಶ ಮುಂದುವರೆದಿದೆ. ಇಮ್ರಾನ್ ಹತ್ಯೆಯತ್ನದಲ್ಲಿ ಐಎಸ್‌ಐ ಪ್ರಮುಖ ಪಾತ್ರ ಹೊಂದಿದೆ ಎಂದು ಆರೋಪಿಸಿ ಐಎಸ್‌ಐ ಮುಖ್ಯಸ್ಥ ಮೇಜರ್ ಜನರಲ್ ಫೈಸಲ್ ನಸೀರ್ ವಿರುದ್ಧ ಕಾರ್ಯಕರ್ತರ ಆಕ್ರೋಶದ ಕಟ್ಟೆ ಒಡೆದು ಹೋಗಿದ್ದು, ಪ್ರತಿಭಟನೆ ಮತ್ತಷ್ಟು ಉಗ್ರರೂಪ ಪಡೆಯುವ ಸಾಧ್ಯತೆ ಇದೆ. ಖೈಬರ್ ಫಖ್ತುನ್ವಾದ ಪೇಶಾವರ್‌ನಲ್ಲಿರುವ ಐಎಸ್‌ಐ ಕಾರ್ಪ್ಸ್ ಕಮಾಂಡರ್ ನಿವಾಸದ ಮುಂದೆ ಜನರು ಪ್ರತಿಭಟನೆ ಆರಂಭಿಸಿದ್ದಾರೆ. ಕಾರ್ಯಕರ್ತರು ಪ್ರತಿಭಟನೆ ನಡೆಸುವ ವಿಡಿಯೋವನ್ನು ಪಿಟಿಐ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದೆ. ಒಟ್ಟಿನಲ್ಲಿ ಪಾಕಿಸ್ತಾನದಲ್ಲಿ ಸ್ಥಿತಿ ಕ್ಷಣದಿಂದ ಕ್ಷಣಕ್ಕೆ ಬಿಗಡಾಯಿಸುತ್ತಿದ್ದು, ಜನರು ದಂಗೆ ಏಳಲು ಎಲ್ಲಾ ಸಾಧ್ಯತೆಗಳಿವೆ.