
ವಾಷಿಂಗ್ಟನ್, ಮೇ ೨೩- ಸ್ಟೇಸ್‌ಎಕ್ಸ್ ರಾಕೆಟ್‌ನಲ್ಲಿ ಭಾನುವಾರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್)ದತ್ತ ಪ್ರಯಾಣ ಬೆಳೆಸಿದ್ದ ಸೌದಿ ಅರೇಬಿಯಾದ ರೈಯಾನಾಹ್ ಬರ್ನಾವಿ ಇದೀಗ ಐಎಸ್‌ಎಸ್ ತಲುಪಿದ್ದಾರೆ. ಈ ಮೂಲಕ ಈ ಸಾಧನೆ ತೋರಿದ ಅರಬ್ ನಾಡಿನ ಮೊದಲ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಆಕ್ಸಿಯಮ್ ಸ್ಪೇಸ್‌ನ ಎರಡನೇ ಖಾಸಗಿ ಮಿಷನ್‌ನಲ್ಲಿರುವ ಇಬ್ಬರು ಸೌದಿ ನಾಗರಿಕರಲ್ಲಿ ರೈಯಾನಾಹ್ ಬರ್ನಾವಿ ಒಬ್ಬರಾಗಿದ್ದಾರೆ. ಅಲಿ ಅಲ್ಖಾರ್ನಿ ಮತ್ತೊಬ್ಬ ಸೌದಿ ಗಗನಯಾತ್ರಿಯಾಗಿದ್ದಾರೆ. ಇದು ಭಾನುವಾರ ಅಮೆರಿಕಾದ ಸ್ಪೇಸ್‌ಎಕ್ಸ್ ಫಾಲ್ಕನ್ ೯ ರಾಕೆಟ್‌ನಲ್ಲಿ ಗಗನಕ್ಕೆ ಚಿಮ್ಮಿತ್ತು. ಇದೀಗ ಫಾಲ್ಕನ್-೯ ರಾಕೆಟ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್)ಕ್ಕೆ ತಲುಪಿದ್ದು, ಇತಿಹಾಸ ನಿರ್ಮಿತವಾಗಿದೆ. ಸೌದಿ ಅರೇಬಿಯಾದ ಮೊದಲ ಮಹಿಳಾ ಗಗನಯಾನಿ ರೈಯಾನಾಹ್ ಬರ್ನಾವಿ, ಸೌದಿ ವಾಯುಪಡೆಯ ಪೈಲಟ್ ಅಲಿ ಅಲ್-ಖಾರ್ನಿ, ಕೆನಡಿ ಬಾಹ್ಯಾಕಾಶ ಕೇಂದ್ರದ ನಿವೃತ್ತ ನಾಸಾ ಗಗನಯಾತ್ರಿ ಹಾಗೂ ಅಮೆರಿಕದ ಉದ್ಯಮಿ ಇದ್ದಾರೆ. ಸೋಮವಾರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿರುವ ಈ ನಾಲ್ವರು ಅಲ್ಲಿ ೧೦ ದಿನಗಳನ್ನು ಕಳೆದ ಬಳಿಕ ಫ್ಲೋರಿಡಾದ ಕಡಲ ತೀರಕ್ಕೆ ಬಂದಿಳಿಯಲಿದ್ದಾರೆ ಎನ್ನಲಾಗಿದೆ. ನಾಸಾದ ನಿವೃತ್ತ ಗಗನಯಾತ್ರಿ, ಬಾಹ್ಯಾಕಾಶದಲ್ಲಿ ಒಟ್ಟು ೬೬೫ ದಿನ ವಾಸಿಸಿದ ದಾಖಲೆ ಬರೆದಿರುವ ಪೆಗೀ ವಿಟ್ಸನ್ ನೇತೃತ್ವದಲ್ಲಿ ಈ ಗಗನಯಾತ್ರೆ ನಡೆಯುತ್ತಿದ್ದು ಬಾಹ್ಯಾಕಾಶ ನಿಲ್ದಾಣದ ಪ್ರಥಮ ಮಹಿಳಾ ಕಮಾಂಡರ್ ಎಂಬ ದಾಖಲೆಗೆ ವಿಟ್ಸನ್ ಪಾತ್ರರಾಗಿದ್ದಾರೆ. ಇನ್ನು ೩೪ ವರ್ಷದ ಬಯೋಮೆಡಿಕಲ್ ವಿಜ್ಞಾನಿಯಾಗಿರುವ ರೈಯಾನಾಹ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಾಂಡಕೋಶ ಮತ್ತು ಸ್ತನ ಕ್ಯಾನ್ಸರ್ ಸಂಶೋಧನೆಯನ್ನು ಕೈಗೊಳ್ಳಲಿದ್ದಾರೆ. ಇನ್ನು ಐಎಸ್‌ಎಸ್ ತಲುಪುವ ಮುನ್ನ ರೈಯಾನಾಹ್ ತಾನು ಕಳುಹಿಸಿರುವ ವಿಡಿಯೋ ಸಂದೇಶದಲ್ಲಿ, ಪ್ರಪಂಚದಾದ್ಯಂತದ ಜನರಿಗೆ, ಭವಿಷ್ಯವು ತುಂಬಾ ಉಜ್ವಲವಾಗಿದೆ. ನೀವು ದೊಡ್ಡ ಕನಸು ಕಾಣಬೇಕೆಂದು ನಾನು ಬಯಸುತ್ತೇನೆ, ನಿಮ್ಮನ್ನು ನಂಬಿರಿ ಮತ್ತು ಮಾನವೀಯತೆಯನ್ನು ನಂಬಿರಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.