ಐಎಂಎ ವಂಚನೆ : ಬೇಗ್ 29ನೇ ಆರೋಪಿ

ಬೆಂಗಳೂರು,ಏ.೨೮-ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಮಾಜಿ ಸಚಿವ ಆರ್.ರೋಷನ್ ಬೇಗ್ ವಿರುದ್ಧ ನಗರದ ವಿಶೇಷ ನ್ಯಾಯಾಲಯಕ್ಕೆ ಸಿಬಿಐ ಪೂರಕ ಆರೋಪಪಟ್ಟಿ( ಚಾರ್ಜ್ ಶೀಟ್) ಸಲ್ಲಿಸಿದೆ.
ಐಎಂಎ ಕಂಪನಿ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ಹಣ ಹೂಡಿಕೆ ಮಾಡಿಸಿಕೊಂಡು ಅಸಲು, ಬಡ್ಡಿ ಹಣವನ್ನೂ ನೀಡದೆ ೧ ಲಕ್ಷ ಠೇವಣಿದಾರರಿಂದ ೪ ಸಾವಿರ ಕೋಟಿ ರೂಪಾಯಿ ವಂಚಿಸಿದ ಆರೋಪದಡಿ ಸಿಬಿಐ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿತ್ತು.
ಇದೇ ಪ್ರಕರಣದಲ್ಲಿ ಐಎಂಎ ಕಂಪನಿ ಪರವಾಗಿ ಪ್ರಮೋಟ್ ಮಾಡಲು ರೋಷನ್ ಬೇಗ್ ಹಣ ಪಡೆದು ಚುನಾವಣಾ ವೆಚ್ಚಗಳಿಗೆ ಬಳಸಿಕೊಂಡಿದ್ದಾರೆ. ಅಮಾಯಕರಿಗೆ ಹಣ ಹೂಡಿಕೆ ಮಾಡಲು ಪ್ರಚೋದನೆ ನೀಡಿದ್ದಾರೆ ಎಂಬ ಆರೋಪವಿದೆ.
ಸದ್ಯ ಪ್ರಕರಣದಲ್ಲಿ ರೋಷನ್ ಬೇಗ್ ಅವರನ್ನು ೨೯ನೇ ಆರೋಪಿಯಾಗಿ ಮಾಡಲಾಗಿದೆ.ಬಹುಕೋಟಿ ವಂಚನೆ ಪ್ರಕರಣದಲ್ಲಿ ಈಗಾಗಲೇ ೩೩ ಮಂದಿ ಆರೋಪಿಗಳ ವಿರುದ್ಧ ೩ ಬಾರಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
೪೦೦ ಕೋಟಿ ರೂ.ಹಣ ಪಡೆದ ಆರೋಪದಡಿ ಅದೇ ಹಣದಲ್ಲಿ ರೋಷನ್ ಬೇಗ್? ಹಲವೆಡೆ ಆಸ್ತಿ ಖರೀದಿಸಿದ್ದಾರೆ ಎಂದು ಆರೋಪಿಸಿ, ಕರ್ನಾಟಕ ಠೇವಣಿದಾರರ ಹಿತರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆಸ್ತಿ ಜಪ್ತಿ ಮಾಡಲಾಗಿತ್ತು.
೨೦೧೯ ರಲ್ಲಿ ಐಎಂಎ ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು. ಇದರಲ್ಲಿ ಕೆಲ ಹಿರಿಯ ಅಧಿಕಾರಿಗಳ ಹೆಸರು ಸಹ ಥಳಕು ಹಾಕಿಕೊಂಡಿತ್ತು.