ಐಎಂಎಫ್ ಉನ್ನತ ಹುದ್ದೆ ಅಲಂಕರಿಸಲು ಗೀತಾ ಸಜ್ಜು

ವಾಷಿಂಗ್ಟನ್, ಡಿ.೩-ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ನ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಕಾರ್ಯ ನಿರ್ವಹಿಸುತ್ತಿರುವ ಭಾರತ ಮೂಲದ ಗೀತಾ ಗೋಪಿನಾಥ್, ಈ ಸಂಸ್ಥೆಯ ಎರಡನೇ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಲು ಸಜ್ಜಾಗಿದ್ದಾರೆ.
ಜೆಫ್ರಿ ಒಕಮೊಟೊ ಅವರಿಂದ ಈ ಹೊಣೆಗಾರಿಕೆಯನ್ನು ಗೀತಾ ಗೋಪಿನಾಥ್ ಪಡೆಯಲಿದ್ದಾರೆ ಎಂದು ಸಂಸ್ಥೆ ಪ್ರಕಟಿಸಿದೆ.
ಐಎಂಎಫ್‌ನ ಮುಖ್ಯ ಅರ್ಥಶಾಸ್ತ್ರಜ್ಞರಾದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾದ ಗೀತಾ ಗೋಪಿನಾಥ್, ಮೂರು ವರ್ಷಗಳ ಸಾರ್ವಜನಿಕ ಸೇವೆಯ ಬಳಿಕ ಮುಂದಿನ ಜನವರಿಯಲ್ಲಿ ಹಾರ್ವಡ್ ವಿಶ್ವವಿದ್ಯಾನಿಲಯಕ್ಕೆ ಮರು ಸೇರ್ಪಡೆಯಾಗುವುದಾಗಿ ಕಳೆದ ಅಕ್ಟೋಬರ್‌ನಲ್ಲಿ ಪ್ರಕಟಿಸಿದ್ದರು.
ಈ ಹಿನ್ನೆಲೆಯಲ್ಲಿ ಇದೀಗ ಗೀತಾ ಅವರ ಹೊಸ ಹೊಣೆಗಾರಿಕೆ ಅಚ್ಚರಿ ಮೂಡಿಸಿದೆ. ಅಲ್ಲದೆ, ಸಂಸ್ಥೆಯ ಉನ್ನತ ವ್ಯವಸ್ಥಾಪನಾ ತಂಡದಲ್ಲಿ ಕೆಲ ಹೊಣೆಗಾರಿಕೆಗಳ ಮರುಹಂಚಿಕೆ ಮಾಡಲಾಗಿದೆ ಎಂದು ಐಎಂಎಫ್ ಹೇಳಿದೆ.
ಸಂಪ್ರದಾಯದಂತೆ ಉಪ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಅಮೆರಿಕ ನಾಮಕರಣ ಮಾಡುತ್ತದೆ ಹಾಗೂ ಐಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಈ ನೇಮಕಾತಿ ಮಾಡುತ್ತಾರೆ. ಖಜಾನೆ ವಿಭಾಗ ಇದನ್ನು ದೃಢೀಕರಿಸಿದ ಬಳಿಕ ಅವರು ಹೊಣೆಗಾರಿಕೆಯನ್ನು ನಿಭಾಯಿಸುತ್ತಾರೆ ಎಂದು ಹೇಳಲಾಗುತ್ತಿದೆ.

ಯಾರು ಗೀತಾ ಗೋಪಿನಾಥ್
ಸಾಂಕ್ರಾಮಿಕದ ಅವಧಿಯಲ್ಲಿ ಮತ್ತು ೨೦೨೦ರ ಆರ್ಥಿಕ ಹಿಂಜರಿತದ ಅವಧಿಯಲ್ಲಿ ಐಎಂಎಫ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿ ಗೀತಾ ಗೋಪಿನಾಥ್ ಕಾರ್ಯ ನಿರ್ವಹಿಸಿದ್ದರು. ಹಾರ್ವರ್ಡ್ ವಿವಿಯಲ್ಲಿ ೨೦೦೫ರಿಂದ ಪ್ರಾಧ್ಯಾಪಕರಾಗಿರುವ ಅವರು, ೨೦೧೯ರಲ್ಲಿ ಐಎಂಎಫ್ ಸೇರಿದ್ದರು.
ಇನ್ನೂ,೨೦೨೦ರ ಮಾರ್ಚ್‌ನಲ್ಲಿ ಪ್ರಥಮ ಉಪ ಎಂಡಿ ಆಗಿ ಅಧಿಕಾರ ಸ್ವೀಕರಿಸಿದ ಒಕ-ಮೊಟೊ ಖಾಸಗಿ ವಲಯಕ್ಕೆ ಮರಳುತ್ತಿರುವ ಹಿನ್ನೆಲೆಯಲ್ಲಿ ಗೀತಾ ಗೋಪಿನಾಥ್ ಅವರನ್ನು ಈ ಹುದ್ದೆಗೆ ಆಯ್ಕೆ ಮಾಡಲಾಗಿದೆ.