ಏ.9ರಂದು ಜಿಲ್ಲಾ ಜಾನಪದ ಪರಿಷತ್ ಉದ್ಘಾಟನೆ: ಕಲಾ ತಂಡಗಳಿಂದ ಭವ್ಯ ಮೆರವಣಿಗೆ

ಕಲಬುರಗಿ,ಏ.7: ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಏಪ್ರಿಲ್ 9ರಂದು ಬೆಳಿಗ್ಗೆ ಹತ್ತು ಗಂಟೆಗೆ ಜಿಲ್ಲಾ ಜಾನಪದ ಪರಿಷತ್ ಘಟಕದ ಉದ್ಘಾಟನೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ ಜಿಲ್ಲಾಧ್ಯಕ್ಷ ಸಿ.ಎಸ್. ಮಾಲಿಪಾಟೀಲ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9 ಗಂಟೆಗೆ ನಗರದ ಮಿನಿ ವಿಧಾನಸೌಧದದಿಂದ ವಿಶ್ವೇಶ್ವರಯ್ಯ ಭವನದವರೆಗೆ ಕಲಾ ತಂಡಗಳಿಂದ ಭವ್ಯ ಮೆರವಣಿಗೆ ಆಯೋಜಿಸಲಾಗಿದೆ ಎಂದರು.
ಉದ್ಗಾಟನೆಯನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಪ್ರೊ. ಎಚ್.ಟಿ. ಪೋತೆ ಅವರು ನೆರವೇರಿಸುವರು. ದಿವ್ಯ ಸಾನಿಧ್ಯವನ್ನು ಶ್ರೀಮತಿ ದೀಪಾಲಿ ಲಿಂಗರಾಜಪ್ಪ ಅಪ್ಪಾ ಹಾಗೂ ಅಧ್ಯಕ್ಷತೆಯನ್ನು ಹಿರಿಯ ಮಕ್ಕಳ ಕವಿ ಏ.ಕೆ. ರಾಮೇಶ್ವರ್ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್. ಚನ್ನೂರ್, ಜೆಡಿಎಸ್ ಮುಖಂಡ ಕೃಷ್ಣಾರೆಡ್ಡಿ, ಮಾಜಿ ಕುಲಪತಿ ಡಾ. ಪ್ರತಾಪಸಿಂಗ್ ತಿವಾರಿ, ಡಾ. ಸಿದ್ರಾಮಪ್ಪ ಪಾಟೀಲ್ ಧಂಗಾಪೂರ್, ಪ್ರೊ. ಬಸವರಾಜ್ ಪೋಲಿಸ್ ಪಾಟೀಲ್ ಅವರು ಆಗಮಿಸುವರು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ನೆನಪು ಮತ್ತು ನೆನಪುಗಳು ಸುಳಿದಾವು ಎಂಬ ಕವನ ಸಂಕಲನವನ್ನು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಕ್ರೆಪ್ಪಗೌಡ ಬಿರಾದಾರ್ ಮತ್ತು ಖ್ಯಾತ ವೈದ್ಯ ಸಾಹಿತಿ ಡಾ. ಎಸ್.ಎಸ್. ಗುಬ್ಬಿ ಅವರು ಬಿಡುಗಡೆ ಮಾಡುವರು. ಲೇಖಕರಾದ ಡಾ. ಗೀತಾ ಪಾಟೀಲ್ ಮತ್ತು ಸಿ.ಎಸ್. ಆನಂದ್ ಅವರು ಕೃತಿಯನ್ನು ಪರಿಚಯಿಸುವರು. ಸಮಾರಂಭದಲ್ಲಿ ಹಿರಿಯ ಜಾನಪದ ವಿದ್ವಾಂಸರಿಗೆ ಮತ್ತು ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಎಲೆ ಮರೆ ಕಾಯಿಯಂತಿರುವ ಜಾನಪದ ಕಲಾವಿದರನ್ನು ಹಾಗೂ ಕಲೆಯನ್ನು ಗುರುತಿಸಿ ಬೆಳೆಸುವ ಕಾರ್ಯವನ್ನು ಪರಿಷತ್ ಹೊಂದಿದೆ. ಅಲ್ಲದೇ ರಾಜ್ಯ ಹಾಗೂ ರಾಷ್ಟ್ರ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸನಾದಿ ಮೇಳ, ಕಣಿ ಹಲಗಿ, ದೊಡ್ಡ ಹಲಗಿ ಮೇಳ, ಮಮ್ಮಾಲಿ ಮೇಲ, ಕರಡಿ ಮಜಲ್, ಕೋಲಾಟ, ಕುದುರೆ ಕುಣಿತ, ನವಿಲು ನೃತ್ಯ, ಪುರವಂತರ ಮೇಳ, ಗೊಂದಲಿ ಮೇಳ, ಹೆಜ್ಜೆ ಮೇಳ, ಮೊಹರಂ ಹಾಡುಗಳು, ಡೊಳ್ಳು ಮೇಳ, ದುಂಧುಮೆ ಹಾಡುಗಳು, ಸಣ್ಣಾಟ ಹಾಗೂ ದೊಡ್ಡಾಟಗಳಂತಹ ಕಲೆಗಳನ್ನು ಸಂರಕ್ಷಿಸಿ ಬೆಳೆಸುವ ಕಾರ್ಯದಲ್ಲಿ ಪರಿಷತ್ ತೊಡಗಲಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಏ.ಕೆ. ರಾಮೇಶ್ವರ್, ಡಾ. ಕೆ.ಎಸ್. ಬಂಧು, ಗುಂಡಪ್ಪ ಗೋಟಕರ್, ಬಾಭು ಎಂ. ಜಾಧವ್, ಡಾ. ಮೀನಾಕ್ಷಿ ಕರೆಡ್ಡಿ, ಸವಿತಾ ಹಿರೇಮಠ್, ಡಾ. ಸಂಗೀತಾ ಪಾಟೀಲ್, ಮಲ್ಲಿಕಾರ್ಜುನ್ ರೋಣದ್, ಮೇನಕಾ ದೇಶಪಾಂಡೆ ಮುಂತಾದವರು ಉಪಸ್ಥಿತರಿದ್ದರು.