ಏ.8 ಮತ್ತು 9ರಂದು ಮೈಸೂರಿಗೆ ಪ್ರಧಾನಿ ಮೋದಿ ಭೇಟಿ

ಮೈಸೂರು,ಏ5:- ಏಪ್ರಿಲ್ 8 ಮತ್ತು 9 ರಂದು ಪ್ರಧಾನಿ ಮೋದಿ ಮೈಸೂರಿಗೆ ಭೇಟಿ ನೀಡಲಿದ್ದಾರೆ.
ಸಂಜೆ 7:30 ಕ್ಕೆ ದೆಹಲಿಯಿಂದ ಮೈಸೂರಿಗೆ ರಾತ್ರಿ 8:30 ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಮೈಸೂರಿನ ರಾಡಿಸನ್ ಬ್ಲೂ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಏಪ್ರಿಲ್ 9 ರಂದು ಬೆಳಗ್ಗೆ 6:30ಕ್ಕೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಚಾಮರಾಜನಗರ ಜಿಲ್ಲೆಯ ಬಂಡೀಪುರಕ್ಕೆ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಲಿದ್ದಾರೆ.
ಬೆಳಗ್ಗೆ 7 ಗಂಟೆಯಿಂದ 9: 30 ರವರೆಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 9:30 ಕ್ಕೆ ಬಂಡೀಪುರದಿಂದ ತಮಿಳುನಾಡಿನ ನೀಲಗಿರಿಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಲಿದ್ದಾರೆ.
ನೀಲಗಿರಿಯಲ್ಲಿ ಆನೆ ಶಿಬಿರಕ್ಕೆ ಭೇಟಿ ನೀಡಿ ಬಳಿಕ ಮೈಸೂರಿನ ಕೆಎಸ್‍ಒಯುನ ತಾತ್ಕಾಲಿಕ ಹೆಲಿಪ್ಯಾಡ್‍ಗೆ ಬೆಳಗ್ಗೆ 11ಕ್ಕೆ ಆಗಮಿಸಿ ಘಟಿಕೋತ್ಸವ ಭವನದಲ್ಲಿ ನಡೆಯುವ ಬಂಡೀಪುರ ಹುಲಿ ಯೋಜನೆ 50ವರ್ಷದ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.ಈ ಹಿನ್ನಲೆ ಎಸ್.ಜಿ.ಪಿ.ತಂಡದಿಂದ ತಪಾಸಣೆ ಮಾಡಲಾಗಿದೆ.
ಮಧ್ಯಾಹ್ನ 12:30 ಕ್ಕೆ ಘಟಿಕೋತ್ಸವ ಭವನದಿಂದ ಮಂಡಕಳ್ಳಿ ವಿಮಾನ ನೀಲ್ದಾಣಕ್ಕೆ ತೆರಳಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.