ಏ .6 ರಂದು ಮೋದಿ ಸಂವಾದ

ಬೆಂಗಳೂರು, ಏ.೪- ಬಿಜೆಪಿಯ ಸಂಸ್ಥಾಪನಾ ದಿನಾಚರಣೆಯಂದು ಪ್ರಧಾನಿ ನರೇಂದ್ರಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವರು.
ಇದೇ ಏ. ೬ ರಂದು ಬಿಜೆಪಿಯ ಸಂಸ್ಥಾಪನಾ ದಿನಾಚರಣೆಯಿದ್ದು, ಅಂದು ಪ್ರಧಾನಿ ಅವರು ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುವರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ಸಿಂಗ್ ತಿಳಿಸಿದ್ದಾರೆ.
ಪಕ್ಷದ ಸಂಸ್ಥಾಪನಾ ದಿನಾಚರಣೆಯಂದು ಪಕ್ಷವನ್ನು ಮತ್ತಷ್ಟು ಬಲಪಡಿಸಿ ಸಂಘಟನೆಯನ್ನು ಗಟ್ಟಿಗೊಳಿಸುವ ಬಗ್ಗೆ ಪ್ರಧಾನಿ ಮೋದಿ ಅವರು ಕಾರ್ಯಕರ್ತರಿಗೆ ಸಂದೇಶ ನೀಡಿ ಕಾರ್ಯಕರ್ತರಲ್ಲಿ ಉತ್ತೇಜನ ಹುರುಪು ತುಂಬಲಿದ್ದಾರೆ ಎಂದು ಅವರು ಹೇಳಿದರು.
ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಈಶ್ವರಪ್ಪ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಈ ತಿಂಗಳ ೮ ರಂದು ರಾಜ್ಯಕ್ಕೆ ತಾವು ಭೇಟಿ ನೀಡುತ್ತಿದ್ದು, ಮೂರು ದಿನಗಳ ಕಾಲ ಕಾರ್ನಟಕದಲ್ಲೇ ಉಳಿದು ಬಿಕ್ಕಟ್ಟು ಶಮನಗೊಳಿಸುವ ಕೆಲಸ ಮಾಡುವುದಾಗಿ ಅವರು ಹೇಳಿದ್ದಾರೆ.
ರಾಜಕೀಯ ಪಕ್ಷವೆಂದ ಮೇಲೆ ಅತೃಪ್ತಿ ಅಸಮಾಧಾನ ಇದ್ದದ್ದೆ. ಎಲ್ಲದಕ್ಕೂ ಮಾರ್ಗೋಪಾಯ ಕಂಡುಕೊಳ್ಳಲಾಗುವುದು. ಯಾವುದರ ಬಗ್ಗೆಯೂ ಬಹಿರಂಗವಾಗಿ ಮಾತನಾಡದಂತೆ ಸಚಿವರು, ಶಾಸಕರು ಹಾಗೂ ಮುಖಂಡರುಗಳಿಗೆ ಈಗಾಗಲೇ ಕಟ್ಟಪ್ಪಣೆ ಮಾಡಲಾಗಿದೆ ಎಂದು ಅವರು ಹೇಳಿದರು.