ಏ.3ರಂದು ನಾಮಪತ್ರ ಯದುವೀರ್ ನಾಮಪತ್ರ ಸಲ್ಲಿಕೆ

ಸಂಜೆವಾಣಿ ನ್ಯೂಸ್
ಮೈಸೂರು: ಏ.02:- ಮಾಜಿ ಸಿಎಂ ಎಚ್‍ಡಿಕೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಏ.3ರಂದು ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ಅಧಿಕೃತವಾಗಿ ನಾಮಪತ್ರ ಸಲ್ಲಿಸುತ್ತೇನೆಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10ಕ್ಕೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ತೆರಳಿ ನಾಮಪತ್ರ ಸಲ್ಲಿಸಲಾಗುವುದು. ಹೀಗಾಗಿ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದರು.
ಮೈಸೂರ-ಕೊಡಗು ಕೃಷಿ ಮತ್ತು ಪ್ರವಾಸೋದ್ಯಮ ಅವಲಂಬಿಸಿದ್ದು, ಈ ಎರಡನ್ನು ಅಭಿವೃದ್ಧಿಗೊಳಿಸುವ ಜೊತೆಗೆ ಎರಡು ಜಿಲ್ಲೆಗಳ ಪಾರಂಪರಿಕತೆಯನ್ನು ಉಳಿಸುವ ಕೆಲಸವನ್ನು ಪ್ರಮಾಣಿಕವಾಗಿ ಮಾಡುವೆ. ತಂಬಾಕು, ಕಾಫಿ, ಭತ್ತ, ಹೊಗೆ ಸೊಪ್ಪು ಬೆಳೆಗಳಿಗೆ ಪೆÇ್ರೀತ್ಸಾಹ ನೀಡುತ್ತೇನೆ. ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರು ಮೊದಲಿನಿಂದಲೂ ಜೊತೆಗೆ ಇದ್ದಾರೆ. ಆದರೆ, ಸದ್ಯಕ್ಕೆ ಅವರು ಎಲ್ಲಿಯೂ ಪ್ರಚಾರಕ್ಕೆ ಬರುತ್ತಿಲ್ಲ. ಮುಂದಿನ ದಿನಗಳಲ್ಲಿ ನಮೊಡನೆ ಸೇರಿಕೊಳ್ಳುವರು ಎಂದು ಹೇಳಿದರು.
ಬಿಜೆಪಿ ಸೇರುವಂತೆ ಮೊದಲಿಂದಲೂ ಚೆರ್ಚಿಸುತ್ತಿದ್ದರು. ಮಾ.13ರಂದು ಬಿಜೆಪಿ ಸೇರ್ಪಡೆಗೆ ಅಧಿಕೃತವಾಗಿ ಸೂಚನೆ ಬಂದಿತು. ಈಗ ಬಿಜೆಪಿ ಅಭ್ಯರ್ಥಿ ಮತ್ತು ರಾಜವಂಶಸ್ಥ ಎಂಬ ಎರಡಕ್ಕೂ ಕಾರಣಕ್ಕೂ ಪ್ರಚಾರಕ್ಕೆ ಹೋದ ಎಲ್ಲ ಕಡೆಗಳಲ್ಲಿಯೂ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಅರಮನೆ ಬರಬೇಡಿ ಎಂದಿಲ್ಲ: ಚುನಾವಣೆಯಲ್ಲಿ ಸ್ಪರ್ಧಿಸಿರುವುದರಿಂದ ಬೇರೆ ಕಡೆ ಕಚೇರಿ ತೆರೆದಿದ್ದೇನೆ ಹೊರತು ನಾನು ಯಾರನ್ನು ಅರಮನೆಗೆ ಬರಬೇಡಿ ಎಂದು ಹೇಳಿಲ್ಲ. ಅರಮನೆ ಬಾಗಿಲು ಸದಾ ತೆರೆದಿರುತ್ತದೆ. ನಾನು ಸಹ ಜನರಿಗೆ ಸ್ಪಂದಿಸುತ್ತೇನೆ. ನನಗೂ ಜನರು ಕರೆ ಮಾಡಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು ಮತ್ತು 2047 ವಿಕಾಸಿತ ಭಾರತದ ದೂರ ದೃಷ್ಟಿಯ ಚಿಂತನೆಯೊಂದಿಗೆ ಚುನಾವಣೆ ಎದುರಿಸುತ್ತಿದ್ದೇವೆ ಎಂದರು.
ಬಿಜೆಪಿಯ ಹಿರಿಯ ವಿ.ಶ್ರೀನಿವಾಸ್ ಪ್ರಸಾದ್ ಅವರು ಬಿಜೆಪಿಯಲ್ಲಿ ಇದ್ದಾರೆ. ಅವರ ಅನುಭವ ಪಡೆಯುತ್ತೇನೆ. ಜೊತೆಗೆ ಅಡಗೂರು ಎಚ್.ವಿಶ್ವನಾಥ್ ಅವರು ಕರೆ ಮಾಡಿ ಬೆಂಬಲ ಸೂಚಿಸುವಂತೆ ಮನವಿ ಮಾಡಿದ್ದು, ಅವರು ಕೂಡ ಸಕಾರತಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಮೈಸೂರು-ಕೊಡಗು ಲೋಕಸಭಾ ಚುನಾವಣೆ ವಿಶೇಷವಾಗಿದೆ. ಬಿಜೆಪಿ-ಜೆಡಿಎಸ್ ಜೊತೆಗೆ ಪಕ್ಷಾತೀತವಾಗಿ ಯದುವೀರ್ ಅವರಿಗೆ ಬೆಂಬಲ ಸೂಚಿಸುತ್ತಿದ್ದಾರೆ.
ರಾಜವಂಶಸ್ಥರ ಕೊಡುಗೆಗಳು ದೇಶಕ್ಕೆ ಮಾದರಿಯಾಗಿದ್ದು, ಯುವಕರು-ಹಿರಿಯರು ಇಂದಿಗೂ ನೆನೆಯುತ್ತಾರೆ. ಹೀಗಾಗಿ ಪ್ರಚಾರಕ್ಕೆ ಹೋದ ಕಡೆಗಳಲ್ಲಿ ವೃದ್ಧರು, ಹಿರಿಯರು, ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜೊತೆಗೆ ರಾಜ್ಯ ಸರ್ಕಾರದ ಅಭಿವೃದ್ಧಿ ಮತ್ತು ಬರಗಾಲಯ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿರುವುದು ಜನತೆಗೆ ತಿಳಿದಿದೆ ಎಂದು ಹೇಳಿದರು.
ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಮಾಜಿ ಮಹಾಪೌರ ಶಿವಕುಮಾರ್, ಬಿಜೆಪಿ ಮುಖಂಡ ಮಹೇಶ್ ರಾಜೇ ಅರಸ್, ಕೇಬಲ್ ಮಹೇಶ್ ಜೋಗಿ ಮಂಜು, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ಜೆಡಿಎಸ್ ಮುಖಂಡ ಕೋಟೆಹುಂಡಿ ಮಹದೇವು, ನಗರ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಕೇಬಲ್, ಗಿರೀಧರ್, ಬಿ.ಎಂ.ರಘು, ಜಿಲ್ಲಾ ಗ್ರಾಮಾಂತರ ಪ್ರಧಾನಕಾರ್ಯದರ್ಶಿ ಮಹೇಶ್ ಮಡವಾಡಿ, ಕಿರಣ್ ಜಯರಾಮೇಗೌಡ, ಕೆ.ವಸಂತ್ ಕುಮಾರ್ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.