ಏ.26 ರಂದು ರಾಹುಲ್ ಗಾಂಧಿ ವಿಜಯಪುರಕ್ಕೆ: ಸಚಿವ ಎಂ.ಬಿ. ಪಾಟೀಲ

ವಿಜಯಪುರ, ಏ.23:ಏ.26ರಂದು ರಾಹುಲ್ ಗಾಂಧಿ ವಿಜಯಪುರಕ್ಕೆ ಚುನಾವಣೆ ಪ್ರಚಾರಕ್ಕೆ ಆಗಮಿಸಲಿದ್ದಾರೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿ ಮಾತನಾಡಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ನೂತನ ಬಿಎಲ್ಡಿಇ ಕಾಲೇಜು ಆವರಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ ಎಂದರು.
ನಾವು 168 ಭರವಸೆ ನೀಡಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ನೀರಾವರಿ ಯೋಜನೆಗಳಿಗೆ ಹೆಚ್ಚು ಒತ್ತು ನೀಡಲಾಗಿತ್ತು. ಈಗ ಪಂಚ ಗ್ಯಾರಂಟಿ ಭರವಸೆ ನೀಡಿ ಅವುಗಳನ್ನು ಈಡೇರಿಸಿದ್ದೇವೆ. ಕಾಂಗ್ರೆಸ್ ಸರಕಾರ ನುಡಿದಂತೆ ನಡೆಯುವ ಸರಕಾರವಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.
ಬಿಜೆಪಿ ಏನೆಲ್ಲ ಭರವಸೆ ನೀಡಿ ಅವುಗಳಲ್ಲಿ ಒಂದನ್ನೂ ಈಡೇರಿಸಿಲ್ಲ. ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು. ಅದೂ ಆಗಲಿಲ್ಲ. ಮೋದಿ ಮುಖವಾಡ ಕಳಚಿದೆ. 7600 ಕೋಟಿ ಸಿಬಿಐ, ಐಟಿ ರೇಡ್ ಮಾಡಿ ಹಣ ಗಳಿಸುತ್ತಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕು ಎಂದರು.
ದೆಹಲಿಯಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ. ಅದಕ್ಕೂ ಸ್ಪಂದಿಸಲಿಲ್ಲ.
ಸುಮಾರು 14 ವರ್ಷದಲ್ಲಿ ಅಧಿಕಾರದಲ್ಲಿ ಇದ್ದರೂ ಆಲಮಟ್ಟಿ ಅಣೆಕಟ್ಟೆ ನೋಟಿಫಿಕೇಶನ್ ಹೊರಡಿಸಲು ಜಿಗಜಿಣಗಿ ಒತ್ತಾಯ ಮಾಡಿಲ್ಲ. ಲೋಕಸಭೆಯಲ್ಲಿ ಒಂದು ಪ್ರಶ್ನೆ ಕೇಳಿಲ್ಲ. ಕಾಂಗ್ರೆಸ್ ಕಡೆಗೆ ಜನರ ಒಲವು ಹೆಚ್ಚಾಗಿದೆ. ಕಾಂಗ್ರೆಸ್ ವಗೆ ಉತ್ಮ ವಾತಾವರಣ ಇದೆ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರು
2 ಲಕ್ಷ ಮತಗಳ ಅಂತರದಿಂದ ಗೆಲವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಕ್ಕರೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಕೇಂದ್ರ ಸರಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ. ಬರ ಪರಿಹಾರ ನೀಡದೆ ಇರುವುದಕ್ಕೆ ಕೆಲ ರಾಜ್ಯ ಸರಕಾರಗಳು ಸುಪ್ರೀಂ ಕೋರ್ಟ್ ಗೆ ಮೊರೆ ಹೋಗಿದ್ದಾರೆ. ಕೃಷ್ಣ, ಮಹದಾಯಿ ಯೋಜನೆಗೆ ಅನುದಾನ ನೀಡಿ ಕಾಮಗಾರಿ ಕೈಗೊಳ್ಳಲು ಡಬಲ್ ಎಂಜಿನ್ ಬಿಜೆಪಿ ಸರಕಾರಕ್ಕೆ ಆಗಿಲ್ಲ. ಅದನ್ನು ಈಗ ಜನರು ಸಿಂಗಲ್ ಎಂಜಿನ್ ಸರಕಾರ ಮಾಡಲು ಹೊರಟಿದೆ. ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ. ಸಿಬಿಐ, ಇಡಿ ಮುಂತಾದ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಮುಖ್ಯಮಂತ್ರಿಗಳನ್ನು ಜೈಲಿಗೆ ತಳ್ಳುತ್ತಿದೆ. 75 ವರ್ಷದ ದೇಶದ ಇತಿಹಾಸದಲ್ಲಿ ಚುನಾವಣೆ ಕಾಲದಲ್ಲಿ ಮುಖ್ಯಮಂತ್ರಿಯನ್ನು ಜೈಲಿನಲ್ಲಿ ಇಟ್ಟು ಚುನಾವಣೆ ಮಾಡಿದ್ದು ನೋಡಿಲ್ಲ ಎಂದರು.
ಕೂಡಗಿ ಎನ್.ಟಿ.ಪಿ.ಸಿಯಿಂದ ಬ್ರಾಡ್ ಗೇಜ್ ರೈಲು ಮಾರ್ಗವಾಗಿದೆ. ಇದು ಸಂಸದ ರಮೇಶ ಜಿಗಜಿಣಗಿ ಕೊಡುಗೆ ಏನಿಲ್ಲ ಎಂದು ಟೀಕಿಸಿದರು.
ವಿಜಯಪುರ ಜಿಲ್ಲೆಯನ್ನು 371 ಅಡಿ ಸೇರಿಸಲು ಸಂಸದ ಜಿಗಜಿಣಗಿ ಏನೂ ಮಾಡಿಲ್ಲ. ಬಿಜೆಪಿ ಈ ಬಾರಿ ಧೂಳಿಪಟವಾಗುತ್ತದೆ. ಕೇವಲ 8ರಿಂದ 10 ಸ್ಥಾನಗಳಲ್ಲಿ ಬಿಜೆಪಿ ಗೆಲವು ಸಾಧಿಸಬಹುದು ಎಂದರು.
ಬಂಗಾರ ಧಾರಣೆ ಗಗನಕ್ಕೇರಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರ ಜೀವನ ದುಸ್ತರವಾಗಿದೆ. ಆದ್ದರಿಂದ ಬಿಜೆಪಿ ಸರಕಾರ ಕಿತ್ತೆಸೆಯಲು ಕಾಂಗ್ರೆಸ್ ಗೆ ಮತ ನೀಡಬೇಕು ಎಂದು ಕೇಳಿಕೊಂಡರು.
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು.
ಅಭ್ಯರ್ಥಿ ರಾಜು ಆಲಗೂರ ಮಾತನಾಡಿ, ಈ ಚುನಾವಣೆಯಲ್ಲಿ ನಾನು ಗೆದ್ದರೆ ಅದು ನನ್ನ ಗೆಲವು ಅಲ್ಲ. ಜನತೆಯ ಗೆಲವು ಆಗಿದೆ. ಬದಲಾವಣೆ ಗಾಳಿ ಬೀಸಿದೆ. ನನ್ನ ಗೆಲವು ನಿಶ್ಚಿತ ಎಂದರು.
ಚುನಾವಣೆ ವೀಕ್ಷಕ ಡಾ.ಸೈಯದ ಬುರಹಾನುದ್ದೀನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ, ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ, ಶಾಸಕರಾದ ಅಶೋಕ ಮನಗೂಳಿ, ವಿಠಲ ಕಟಕದೊಂಡ, ಕೌಶಲ್ಯಭಿವೃದ್ಧಿ ನಿಗಮ ಅಧ್ಯಕ್ಷೆ ಕಾಂತಾ ನಾಯಕ ಮತ್ತಿತರರು ಇದ್ದಾರೆ.