ಏ. 19 ರೊಳಗೆ ಶೇ. 90ರಷ್ಟು ಲಸಿಕೆ ವಿತರಣೆ :ಬೈಡೆನ್

ವಾಷಿಂಗ್ಟನ್,ಮಾ.೩೦- ಏಪ್ರಿಲ್ ೧೯ರ ಒಳಗೆ ಶೇ. ೯೦ರಷ್ಟು ಮಂದಿ ವಯಸ್ಕರಿಗೆ ಕೋವಿಡ್ ಲಸಿಕೆ ನೀಡಲಾಗುವುದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಪ್ರಕಟಿಸಿದ್ದಾರೆ.
ಅಮೆರಿಕದಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ವಿತರಣೆ ವೇಗವನ್ನು ಹೆಚ್ಚಿಸಲು ಬೈಡನ್ ಮುಂದಾಗಿದ್ದು, ಮೇ ೧ರ ಒಳಗಾಗಿ ಬಾಕಿ ಉಳಿದ ಶೇ. ೧೦ ರಷ್ಟು ಮಂದಿ ಲಸಿಕೆ ಪಡೆಯಲಿದ್ದಾರೆ.
ಇನ್ನು ಮೂರು ವಾರಗಳ ಅವಧಿಯಲ್ಲಿ ಅಂದರೆ ಏ. ೧೯ರ ಒಳಗಾಗಿ ದೇಶದಲ್ಲಿರುವ ಅರ್ಹ ವಯಸ್ಕರಲ್ಲಿ ಶೇ. ೯೦ ಮಂದಿ ಲಸಿಕೆ ಪಡೆಯಲಿದ್ದಾರೆ ಎಂದು ತಿಳಿಸಲು ತಮಗೆ ಹರ್ಷವಾಗುತ್ತಿದೆ.
ಇಷ್ಟೊಂದು ಮಂದಿಗೆ ಪೂರೈಸುವಷ್ಟು ಲಸಿಕೆ ದಾಸ್ತಾನು ಇದೆ ಎಂದು ಶ್ವೇತಭವನದಲ್ಲಿ ಸುದ್ದಿಗಾರರಿಗೆ ವಿವರ ಒದಗಿಸಿದರು. ಅಮೆರಿಕದಲ್ಲಿ ಪ್ರತಿದಿನ ೬೦ ಸಾವಿರ ಹೊಸ ಸೋಂಕಿನ ಪ್ರಮಾಣಗಳು ದಾಖಲಾಗುತ್ತಿದ್ದು, ಕೋವಿಡ್-೧೯ನ್ನು ನಿಯಂತ್ರಿಸಲು ಬೈಡೆನ್ ಈ ಕ್ರಮಕೈಗೊಂಡಿದ್ದಾರೆ. ೬೦ ದಿನಗಳಲ್ಲಿ ದೇಶದ ೧೦ ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಮುಂದಿನ ೪೦ ದಿನಗಳಲ್ಲಿ ಇನ್ನು ೧೦ ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.