ಏ.17 ರತನಕ ಸಿಸೋಡಿಯಾ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ನವದೆಹಲಿ, ಏ.3-ಮದ್ಯ ನೀತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಉಪಮುಖ್ಯಮಂತ್ರಿ ಹಾಗೂ ಆಪ್‌ ನಾಯಕ ಮನೀಶ್‌ ಸಿಸೋಡಿಯಾ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ಏಪ್ರಿಲ್‌ 17 ರವರೆಗೆ ವಿಸ್ತರಿಸಿದೆ.
ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಮನೀಶ್​ ಸಿಸೋಡಿಯಾ ಅವರನ್ನು ಸಿಬಿಐ ಪೊಲೀಸರು ದಿಲ್ಲಿಯ ರೋಸ್ ಅವೆನ್ಯೂ ಕೋರ್ಟ್‌ಗೆ ಇಂದು ಹಾಜರುಪಡಿಸಿದರು.
ಬಳಿಕ ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು ವಿಸ್ತರಿಸುವಂತೆ ಕೋರಿ ಸಿಬಿಐ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಸಿಬಿಐ ಮನವಿ ಪುರಸ್ಕರಿಸಿದ ಕೋರ್ಟ್​ 14 ದಿನಗಳ ಕಾಲ ಬಂಧನ ವಿಸ್ತರಣೆಗೆ ಆದೇಶಿಸಿತು.
ತನಿಖೆಯು ನಿರ್ಣಾಯಕ ಹಂತದಲ್ಲಿದೆ. ಹೀಗಾಗಿ ಸಿಸೋಡಿಯಾ ಅವರ ಬಂಧನವನ್ನು ಇನ್ನಷ್ಟು ದಿನ ವಿಸ್ತರಣೆ ಮಾಡಬೇಕು ಎಂದು ಸಿಬಿಐ ಅಧಿಕಾರಿಗಳು ಸಿಬಿಐ ವಿಶೇಷ ಕೋರ್ಟ್​ಗೆ ಮನವಿ ಮಾಡಿದ್ದರು.
ಅಬಕಾರಿ ನೀರಿತಿ ಹಗರಣದಲ್ಲಿ ಸಿಸೋಡಿಯಾ ಅವರನ್ನು ಫೆ.26ರಂದು ಸಿಬಿಐ ಬಂಧಿಸಿತ್ತು.