ಏ. 16 ರಂದು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ನಾಮಪತ್ರ ಸಲ್ಲಿಕೆ

ಸಂಜೆವಾಣಿ ವಾರ್ತೆ,
ವಿಜಯಪುರ,ಏ.14:ಏ. 16 ರಂದು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಲೋಕಸಭೆಗೆ ಸ್ಪರ್ಧೆ ಕೋರಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಅಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ತಿಳಿಸಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪ್ರಚಾರ ಕಾರ್ಯಾಲಯದಿಂದ ಬೆಳಗ್ಗೆ 10 ಗಂಟೆಗೆ ರ್ಯಾಲಿ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದರು.
ಸಿ.ಟಿ. ರವಿ, ಅರವಿಂದ ಬೆಲ್ಲದ, ಉಮೇಶ ಜಾಧವ, ಹಾಲಪ್ಪ ಆಚಾರ್ಯ, ಜಗದೀಶ ಹಿರೇಮನಿ, ನಾರಾಯಣಸಾ ಭಾಂಡಗೆ ಮತ್ತಿತರ ಪಕ್ಷದ ನಾಯಕರು ನಾಮಪತ್ರ ಸಲ್ಲಿಕೆ ವೇಳೆ ಹಾಜರಿರಲಿದ್ದಾರೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ 10 ವರ್ಷದ ಕಾಲಾವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಹಾಗೂ ಸಂಸದ ರಮೇಶ ಜಿಗಜಿಣಗಿ ಅವರ ಒಳ್ಳೆಯತನದಿಂದ ಕ್ಷೇತ್ರದಲ್ಲಿ ಬಿಜೆಪಿ ಅಲೆ ಇದೆ. ಹಾಗಾಗಿ ಈ ಬಾರಿಯೂ ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಡಾ. ಬಾಬು ರಾಜೇಂದ್ರ ನಾಯಕ ಅವರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನ ಹೊಂದಿದ್ದಾರೆ. ಇದು ಸಹಜ. ಬರಲಿರುವ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಮಾಜಿ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ರಮೇಶ ಭೂಸನೂರ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಪುರ, ಬಿಜೆಪಿ ಮುಖಂಡರಾದ ವಿಜುಗೌಡ ಪಾಟೀಲ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.