ಏ.16ರ ರಾಹುಲ್‌ಗಾಂಧಿ ಕಾರ್ಯಕ್ರಮ ಯಶಸ್ವಿಗೊಳಿಸಲು ಗೋಪಾಲಕೃಷ್ಣ ಮನವಿ

ಕೋಲಾರ,ಏ,೮-ಕೋಲಾರದಲ್ಲಿ ರಾಹುಲ್ ಗಾಂಧಿ ಏ.೧೬ರಂದು ನಡೆಸಲಿರುವ ಜೈ ಭಾರತ್ ಸಮಾವೇಶಕ್ಕೆ ಶ್ರೀನಿವಾಸಪುರ ತಾಲ್ಲೂಕಿನಿಂದ ಹೆಚ್ಚಿನ ಜನತೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮಾವು ಮಂಡಳಿಯ ಮಾಜಿ ಅಧ್ಯಕ್ಷ ಎಲ್.ಗೋಪಾಲಕೃಷ್ಣ ಕೋರಿದ್ದಾರೆ.
ಸುದ್ಧಿಗಾರರೊಂದಿಗೆ ಅವರು ಮಾತನಾಡಿ, ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವ ಬಿಜೆಪಿ ಸರ್ಕಾರ ಅನರ್ಹಗೊಳಿಸುವ ಮೂಲಕ ಪ್ರಜಾ ಪ್ರಭುತ್ವವನ್ನು ಕಗ್ಗೊಲೆ ಮಾಡಿ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಸಂವಿಧಾನದ ಆಶಯಗಳ ವಿರುದ್ದ ಬಿಜೆಪಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
೨೦೧೯ ಮೇ ೧೩ ರಂದು ಕೋಲಾರದಲ್ಲಿ ರಾಹುಲ್ ಗಾಂಧಿ ಮೋದಿ ಸಮುದಾಯವನ್ನು ಟೀಕಿಸಿದ್ದಾರೆಂದು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದ ಕಾರಣ ನ್ಯಾಯಾಲಯ ಅವರಿಗೆ ೨ ವರ್ಷ ಜೈಲು ಶಿಕ್ಷೆ ನೀಡಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿ ೧ ತಿಂಗಳ ಕಾಲ ಭಂದನಕ್ಕೆ ತಡೆ ನೀಡಿತ್ತು. ಆದರೆ ತೀರ್ಪು ನೀಡಿದ ಮರು ದಿನವೇ ರಾಹುಲ್ ಗಾಂಧಿ ಲೋಕ ಸಭಾ ಸದಸ್ಯತ್ವ ಅನರ್ಹಗೊಳಿಸಿ ಆತುರದ ನಿರ್ಧಾರವನ್ನು ಕೇಂದ್ರ ಬಿಜೆಪಿ ಸರ್ಕಾರ ಕೈಗೊಂಡಿರುವ ಸೇಡಿನ ರಾಜಕಾರಣವಾಗಿದೆ ಎಂದು ಖಂಡಿಸಿದರು.
ರಾಹುಲ್ ಗಾಂಧಿ ಜೋಡೋ ಯಾತ್ರೆಯಲ್ಲಿ ಅವರಿಗೆ ಸಿಕ್ಕಿದ ಜನ ಬೆಂಬಲವನ್ನು ಸಹಿಸಲಾಗದೆ ಕೇಂದ್ರ ಸರ್ಕಾರ ಆತುರ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ರಾಹುಲ್ ಗಾಂಧಿಯನ್ನು ರಾಜಕೀಯವಾಗಿ ಮುಗಿಸುವ ಕೆಲಸ ಮಾಡಲು ಹೊರಟಿದ್ದಾರೆ, ಆದರೆ ಅವರಿಗೆ ಜನ ಬೆಂಬಲ ಇರುವ ತನಕ ಬಿಜೆಪಿಯಿಂದ ಸಾಧ್ಯವಾಗುವುದಿಲ್ಲ, ಇಡಿ ಮತ್ತು ಸಿಬಿಐ ಗಳನ್ನು ಬಳಸಿಕೊಂಡು ಕಾಂಗ್ರೆಸ್ ಮುಖಂಡನ್ನು ಬೆದರಿಸುವ ಹುನ್ನಾರ ಮಾಡುತ್ತಿದ್ದಾರೆ, ಇದು ಹೆಚ್ಚು ದಿನಗಳ ಕಾಲ ನಡೆಯುವುದಿಲ್ಲ ಎಂದರು.
ರಾಹುಲ್ ಗಾಂಧಿಗೆ ಆಗಿರುವ ಅನ್ಯಾಯದ ವಿರುದ್ದ ಕೋಲಾರದಿಂದಲೆ ಉತ್ತರ ನೀಡಲು ಏ.೧೬ ರಂದು ಕೋಲಾರಕ್ಕೆ ಆಗಮಿಸುವ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಶ್ರೀನಿವಾಸಪುರ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಲು ಕೋರಿದರು.