ಏ.16ಕ್ಕೆ ರಾಹುಲ್ ಸಮಾವೇಶ ಮುಂದೂಡಿಕೆ

ಬೆಂಗಳೂರು, ಏ.೮- ಕೋಲಾರದಲ್ಲಿ ಈ ತಿಂಗಳ ೧೦ ರಂದು ರಾಹುಲ್‌ಗಾಂಧಿ ನೇತೃತ್ವದಲ್ಲಿ ನಡೆಯಬೇಕಿದ್ದ ಜೈ ಭಾರತ್ ಸಮಾವೇಶ ಮತ್ತೆ ಮುಂದಕ್ಕೆ ಹೋಗಿದ್ದು, ಏ. ೧೬ ರಂದು ಸಮಾವೇಶ ನಡೆಯಲಿದೆ.
ರಾಹುಲ್‌ಗಾಂಧಿ ಅವರಿಗೆ ವಿಧಿಸಲಾಗಿರುವ ಶಿಕ್ಷೆ ಹಾಗೂ ಸಂಸತ್ ಸದಸ್ಯತ್ವದ ಅನರ್ಹತೆ ಹಿನ್ನೆಲೆಯಲ್ಲಿ ಸಂವಿಧಾನ ರಕ್ಷಣೆಯ ವಿಚಾರವನ್ನು ಮುಂದಿಟ್ಟುಕೊಂಡು ದೇಶಾದ್ಯಂತ ಬೃಹತ್ ಹೋರಾಟಕ್ಕೆ ಮುನ್ನುಡಿ ಬರೆಯಲು ಕಾಂಗ್ರೆಸ್ ಜೈ ಭಾರತ್ ಸಮಾವೇಶವನ್ನು ಆಯೋಜಿಸಿದೆ.
ಈ ಸಮಾವೇಶದ ಮೂಲಕ ಕಾಂಗ್ರೆಸ್ ರಾಹುಲ್‌ಗಾಂಧಿ ಅವರ ಮೊದಲ ಚುನಾವಣಾ ರ್‍ಯಾಲಿಗೂ ನಾಂದಿ ಹಾಡುವ ಉದ್ದೇಶ ಹೊಂದಿತ್ತು. ಸಮಾವೇಶ ಏ. ೧೦ ರಂದು ನಡೆಯಬೇಕಿತ್ತು. ಈಗ ಸಮಾವೇಶವನ್ನು ಏ. ೧೬ಕ್ಕೆ ಮುಂದೂಡಲಾಗಿದೆ.
ಈ ಸಮಾವೇಶಕ್ಕಾಗಿ ಕೋಲಾರದ ಹೊರ ವಲಯದ ಟಮಕಾದಲ್ಲಿ ೧೧ ಎಕರೆ ವಿಶಾಲ ಪ್ರದೇಶದಲ್ಲಿ ಬೃಹತ್ ವೇದಿಕೆಯನ್ನು ಸಿದ್ಧಗೊಳಿಸಲಾಗಿತ್ತು.ಈ ಸಮಾವೇಶದಲ್ಲಿ ರಾಹುಲ್‌ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು, ಪಕ್ಷದ ನಾಯಕಿ ಪ್ರಿಯಾಂಕವಾಧ್ರಾ ಸೇರಿದಂತೆ ಎಲ್ಲ ದೊಡ್ಡ ನಾಯಕರುಗಳು ಪಾಲ್ಗೊಳ್ಳುವರು.
೨೦೧೯ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ರಾಹುಲ್‌ಗಾಂಧಿ ಮೋದಿ ಉಪನಾಮದ ಬಗ್ಗೆ ಮಾಡಿದ್ದ ಟೀಕೆ ಅವರಿಗೆ ೨ ವರ್ಷ ಜೈಲು ಶಿಕ್ಷೆಗೆ ಹಾಗೂ ಸಂಸತ್ ಸದಸ್ಯತ್ವದ ಅನರ್ಹತೆಗೆ ಕಾರಣವಾಗಿತ್ತು. ಹಾಗಾಗಿ, ಇಲ್ಲಿಂದಲೇ ಹೋರಾಟ ಆರಂಭಿಸಲು ಕಾಂಗ್ರೆಸ್ ನಿರ್ಧರಿಸಿದೆ. ಅದರಂತೆ ಈ ಸಮಾವೇಶ ನಡೆಯುತ್ತಿದ್ದು, ಈ ಸಮಾವೇಶದ ಮೂಲಕ ಚುನಾವಣಾ ಪ್ರಚಾರದ ಕಹಳೆಯನ್ನು ಕಾಂಗ್ರೆಸ್ ಮೊಳಗಿಸಲಿದೆ.