ಭಾಲ್ಕಿ:ಎ.9: ಇಲ್ಲಿಯ ಚನ್ನಬಸವಾಶ್ರಮದಲ್ಲಿ ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ, ಡಾ.ಚನ್ನಬಸವ ಪಟ್ಟದ್ದೇವರ 24ನೆಯ ಸ್ಮರಣೋತ್ಸವ ಮತ್ತು ವಚನ ಜಾತ್ರೆ-2023 ನಿಮಿತ್ತ ಶನಿವಾರ ಸಾಮೂಹಿಕ ವಚನ ಪಾರಾಯಣ ಕರಪತ್ರ ಸ್ವಾಗತ ಸಮಿತಿ ಗೌರವಾಧ್ಯಕ್ಷ, ಮಾಜಿ ಶಾಸಕ ಪ್ರಕಾಶ ಖಂಡ್ರೆ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು, ಡಾ.ಚನ್ನಬಸವ ಪಟ್ಟದ್ದೇವರು ತಮ್ಮ ಜೀವಿತಾವಧಿಯಲ್ಲಿ ಗಡಿ ಭಾಗದ ಬೆಳವಣಿಗೆಗೆ ಅದ್ಭುತ ಕೊಡುಗೆ ನೀಡಿದ್ದಾರೆ. ಅಂತಹ ನಿಸ್ವಾರ್ಥ ಸ್ವಾಮೀಜಿ, ನಡೆದಾಡಿದ ದೇವರನ್ನು ನೋಡುವ ಭಾಗ್ಯ ಲಭಿಸಿರುವುದು ನಮ್ಮೆಲ್ಲರ ಪುಣ್ಯವೆಂದು ಭಾವಿಸಿದ್ದೇನೆ.
ಪಟ್ಟದ್ದೇವರ ಜಯಂತಿ, ಸ್ಮರಣೋತ್ಸವ ಡಾ.ಬಸವಲಿಂಗ ಪಟ್ಟದ್ದೇವರ, ಗುರುಬಸವ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಪ್ರತಿವರ್ಷ ವೈಭವದಿಂದ ಆಚರಿಸಲಾಗುತ್ತಿದೆ. ಈ ಬಾರಿಗೆ ಪಟ್ಟದ್ದೇವರ ಕಾರ್ಯಕ್ರಮದ ಜತೆಗೆ ಬಸವಣ್ಣವರ ಜಯಂತ್ಯುತ್ಸವ ಏಕಕಾಲಕ್ಕೆ ಬಂದಿರುವುದು ಸಂತಸ ತರಿಸಿದೆ.
ಉಭಯ ಶ್ರೀಗಳ ಸಾನ್ನಿಧ್ಯದಲ್ಲಿ ಏ.19 ರಿಂದ 23ರ ವರೆಗೆ ಐದು ದಿನಗಳ ಕಾಲ ಅದ್ಧೂರಿಯಾಗಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಎಲ್ಲ ಭಕ್ತರು ತನು, ಮನ, ಧನದಿಂದ ಸಹಕರಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ನೇತೃತ್ವ ವಹಿಸಿದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಪರಮ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಏ.15 ರಿಂದ 21ರ ವರೆಗೆ ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಪ್ರತಿದಿನ ಬೆಳಿಗ್ಗೆ 6 ರಿಂದ 7 ಗಂಟೆ ವರೆಗೆ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಪಾದಿಸಿದ ವಿಶ್ವಗುರು ಬಸವಣ್ಣನವರ ವಚನಗಳು ಎಂಬ ಗ್ರಂಥದ ಸಾಮೂಹಿಕ ಪಾರಾಯಣ ಜರುಗಲಿದೆ. 1 ಸಾವಿರ ಭಕ್ತರು ಸಾಮೂಹಿಕ ವಚನ ಪಾರಾಯಣದಲ್ಲಿ ಭಾಗಿಯಾಗಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗನಕೇರೆ, ತಾಲೂಕು ಜಾನಪದ ಪರಿಷತ್ತು ಅಧ್ಯಕ್ಷ ವಸಂತ ಹುಣಸನಾಳೆ, ಬಾಲ ಬಸವಣ್ಣ ವೇಷಭೂಷಣ ಸಮಿತಿ ಅಧ್ಯಕ್ಷೆ ಶುಭಾಂಗಿ ಬಳತೆ, ಸುನಿತಾ ಮಮ್ಮಾ, ರೇಖಾ ಮಹಾಜನ, ಸಾವಿತ್ರಿ ಪಾಟೀಲ್, ಶೃತಿ ಸಂತೋಷ ಪಾಟೀಲ್, ಸುಜಾತಾ ಧುಮ್ಮನಸೂರೆ, ಅನಿಲ ಹಾಲಕೂಡೆ ಸೇರಿದಂತೆ ಹಲವರು ಇದ್ದರು.