ಕಲಬುರಗಿ:ಎ.13: ನಗರದ ಹೊರವಲಯದಲ್ಲಿರುವ ಕೋಟನೂರ ಡಿ ಗ್ರಾಮದ ಶ್ರೀ ಸಾಧು ಶಿವಲಿಂಗೇಶ್ವರರ 9 ನೇ ಭವ್ಯ ರಥೋತ್ಸವ ಏಪ್ರಿಲ್ 15 ರಂದು ಶನಿವಾರ ರಾತ್ರಿ 9 ಗಂಟೆ ಜರುಗಲಿದೆ.
ಶ್ರೀ ಸಾಧು ಸಿದ್ದಾರೂಢ ಮುತ್ಯಾ ಇವರ ಸಾನಿಧ್ಯದಲ್ಲಿ ಅಂದು ಬೆಳ್ಳಗೆ 8.30 ನಿಮಿಷಕ್ಕೆ ಗದ್ದುಗೆಗೆ ರುದ್ರಾಭಿಷೇಕ ಮತ್ತು ಕಳಸಾರೋಹಣ ಜರುಗುವುದು. ಸಂಜೆ 4 ಗಂಟೆಗೆ ಕೆಸರಟಗಿ ಗ್ರಾಮದ ಶ್ರೀ ಶಿವಲಿಂಗಪ್ಪ ಪೋಲೀಸ್ ಪಾಟೀಲ್ ಮತ್ತು ಶಿವಲಿಂಗಪ್ಪ ಹೂಗಾರ ಇವರ ಮನೆಯಿಂದ ನಂದಿಕೋಲ ಪಲ್ಲಕ್ಕಿ ಮತ್ತೆ ಸಂಜೆ 5 ಗಂಟೆಗೆ ಕೋಟನೂರ ಡಿ ಗ್ರಾಮದ ಶ್ರೀ ಬಸವಂತರಾಯ ಮಾಲಿ ಪಾಟೀಲ್ ಇವರ ಮನೆಯಿಂದ ಸಹ ನಂದಿಕೋಲ ಪಲ್ಲಕ್ಕಿ ಮತ್ತು ಮಿಣಿ ಕುಂಭ ಇವೆಲ್ಲಾ ಶ್ರೀ ಶಿವಲಿಂಗೇಶ್ವರ ದೇವಸ್ಥಾನ ತಲುಪುವವು.
ಕೊಪ್ಪಳದ ಗವಿ ಸಿದ್ದೇಶ್ವರ ಸಂಸ್ಥಾನ ಮಹಾಮಠದ ಅಭಿನವ ಗವಿ ಸಿದ್ದೇಶ್ವರ ಮಹಾಸ್ವಾಮಿಗಳು ಹಾಗೂ ಚಿನ್ಮಯಗಿರಿ ಮಹಾಂತೇಶರ ಮಠದ ಶ್ರೀ ಸಿದ್ದರಾಮ ಶಿವಾಚಾರ್ಯರು ನೇತೃತ್ವವಹಿಸುವರು. ದಂಡಗುಂಡ ಬ್ರಹ್ಮನಮಠದ ಶ್ರೀ ಸಂಗನಬಸವ ಶಿವಾಚಾರ್ಯರು, ಮಾದನಹಿಪ್ಪರಗಾ ವಿರಕ್ತಮಠದ ಶ್ರೀ ಅಭಿವನ ಶಿವಲಿಂಗ ಮಹಾಸ್ವಾಮಿಗಳು, ಮಾದನಹಿಪ್ಪರಗಾ ಮಹಾಸ್ವಾಮಿಗಳಾದ ಶ್ರೀ ಶಾಂತವೀರ ಶಿವಾಚಾರ್ಯರು, ಕಡಕೋಳ ಮಡಿವಾಳೇಶ್ವರ ಮಠದ ಶ್ರೀ ರುದ್ರಮುನಿ ಸ್ವಾಮಿ ಶಿವಾಚಾರ್ಯರು, ನೀಲೂರಿನ ಬಂಗಾರ ಜಡೇ ನೀಲಕಂಠೇಶ್ವರ ಮಠದ ಶ್ರೀ ಶರಣಯ್ಯ ಮಹಾಸ್ವಾಮಿಗಳು, ಗೋಳಾದ ಶ್ರೀ ಚನ್ನಮಲ್ಲಯ್ಯ ಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಿಕೊಳ್ಳುವರು. ಜಾತ್ರೆಯ ನಿಮತ್ತವಾಗಿ ಬರುವ ಎಲ್ಲಾ ಭಕ್ತರಿಗೆ ಮಹಾ ಪ್ರಸಾದ ಸೇವೆಯನ್ನು ಹಮ್ಮಿಕೊಳ್ಳಲಾಗಿದೆ ಆದ್ದರಿಂದ ಸದಭಕ್ತರು ಪಾಲ್ಗೊಳ್ಳಬೇಕೆಂದು ದೇವಸ್ಥಾನ ಆಡಳಿತ ಮಂಡಳಿ ಸದಸ್ಯರಾದ ವಿದ್ಯಾಸಾಗರ ಬಸವಂತರಾಯ ಮಾಲಿ ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.