ಏ.13 ರಿಂದ ನಾಮಪತ್ರ ಸ್ವೀಕಾರ : ಚಂದ್ರಕುಮಾರ್*

ಶಿವಮೊಗ್ಗ, ಏ.12; ಶಿವಮೊಗ್ಗ ವಿಧಾನಸಭಾ ಕ್ಷೇತ್ರ-113 ರಲ್ಲಿ 126568 ಪುರುಷ, 132334 ಮಹಿಳೆ ಮತ್ತು 14 ತೃತೀಯ ಲಿಂಗಿ ಸೇರಿದಂತೆ ಒಟ್ಟು 258916 ಮತದಾರರಿದ್ದಾರೆ. ದಿನಾಂಕ: 13-04-2023 ರಿಂದ ನಾಮಪತ್ರಗಳನ್ನು ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಸ್ವೀಕರಿಸಲಾಗುವುದು ಎಂದು ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಹೆಚ್.ಎನ್.ಚಂದ್ರಕುಮಾರ್ ತಿಳಿಸಿದರು. ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೊಷ್ಟಿಯಲ್ಲಿ ಅವರು ಮಾಹಿತಿ ನೀಡಿ, 113 ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಅಧಿಸೂಚನೆಯನ್ನು ದಿನಾಂಕ  13-04-2023 (ಗುರುವಾರ)ರಂದು ಹೊರಡಿಸಲಾಗುತ್ತದೆ. ದಿನಾಂಕ 13-04-2023 ರಿಂದ 20-04-2023 ರವರೆಗೆ ನಿಯಮಾನುಸಾರ ಅಭ್ಯರ್ಥಿಗಳಿಂದ ನಾಮಪತ್ರಗಳನ್ನು ಪರಿಷತ್ ಸಭಾಂಗಣದಲ್ಲಿ ಸ್ವೀಕರಿಸಲಾಗುವುದು.
ಹೆಚ್ಚುವರಿ ಮತದಾನ ಕೇಂದ್ರಗಳು :113 ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ 286 ಮತದಾನ ಕೇಂದ್ರಗಳಿದ್ದು, 8 ಹೆಚ್ಚುವರಿ ಮತದಾನ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ. ಆಯೋಗದಿಂದ ಅನುಮತಿ ದೊರೆತ ನಂತರದಲ್ಲಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲು ಕ್ರಮಕೈಗೊಳ್ಳಲಾಗುತ್ತದೆ.ಮತದಾರರ ಪಟ್ಟಿಯಲ್ಲಿ ನೋಂದಾಯಿಸಲ್ಪಟ್ಟ ಮತದಾರರಿಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ವೋಟರ್ ಸ್ಲಿಪ್‍ನ್ನು ವಿತರಿಸುತ್ತಾರೆ.ಡಿವೈಎಸ್‍ಪಿ ಬಾಲರಾಜ್ ಮಾತನಾಡಿ, ನಾಮಪತ್ರ ಸಲ್ಲಿಕೆ ಆರಂಭ ದಿನಾಂಕದಿಂದ ಅಂತಿಮ ದಿನದವರೆಗೆ ಪಾಲಿಕೆ ಹಿಂದಿನ ಗೇಟ್‍ನ್ನು ಸಾರ್ವಜನಿಕರ ಪ್ರವೇಶಕ್ಕೆ ನಿಷೇಧಿಸಲಾಗುವುದು, ಪಾಲಿಕೆಯ ಇನ್ನೊಂದು ಗೇಟ್‍ನಿಂದ ಪ್ರವೇಶಿಸಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.ಪತ್ರಿಕಾಗೋಷ್ಟಿಯಲ್ಲಿ ಐಎಎಸ್ ಪ್ರೊಬೇಷನರಿ ಅಧಿಕಾರಿ ದಲ್ಜೀತ್ ಕುಮಾರ್ ಇದ್ದರು.