ಏ.13ರಿಂದ ನಾಮಪತ್ರ ಸಲ್ಲಿಕೆ, ಏ.24ರಂದು ಉಮೇದುವಾರಿಕೆ ಹಿಂಪಡೆಯುವಿಕೆ


ಬಳ್ಳಾರಿ,ಏ.12: 93-ಬಳ್ಳಾರಿ ಗ್ರಾಮೀಣ (ಪ.ಪಂ) ವಿಧಾನಸಭಾ ಕ್ಷೇತ್ರ ಚುನಾವಣೆಗೆ ನಾಮಪತ್ರಗಳನ್ನು ಏ.13ರಿಂದ 20 ರವರೆಗೆ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ (ಏ.14 ಮತ್ತು 16 ರಜೆ ದಿನಗಳನ್ನು ಹೊರತುಪಡಿಸಿ) ನಾಮಪತ್ರಗಳನ್ನು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಸಹಾಯಕ ಆಯುಕ್ತರ ಕಚೇರಿಗೆ ಸಲ್ಲಿಸಬಹುದು ಎಂದು ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಹೇಮಂತ್‍ಕುಮಾರ್.ಎನ್ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಏಪ್ರಿಲ್ 21 ರಂದು ಪರಿಶೀಲನೆ ಮತ್ತು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಏಪ್ರಿಲ್ 24 ರಂದು ಮಧ್ಯಾಹ್ನ 3 ರವರೆಗೆ ಅವಕಾಶವಿದೆ. ಮಧ್ಯಾಹ್ನ 3 ರ ನಂತರ ಅಭ್ಯರ್ಥಿಗಳಿಗೆ ಚುನಾವಣಾ ಚಿಹ್ನೆಗಳನ್ನು ಹಂಚಿಕೆ ಮಾಡಿ ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಲಾಗುವುದು.
ನಾಮಪತ್ರಗಳ ಸ್ವೀಕೃತಿ ಮತ್ತು ಅಗತ್ಯತೆಗಳು: ನಾಮಪತ್ರಗಳ ಪ್ರಪತ್ರಗಳನ್ನು 2ಬಿ ರಲ್ಲಿ ಸಲ್ಲಿಸಬೇಕು. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯ ವಯಸ್ಸು 25 ವರ್ಷಕ್ಕಿಂತ ಕಡಿಮೆ ಇರಬಾರದು. ಒಬ್ಬ ಅಭ್ಯರ್ಥಿ ಗರಿಷ್ಠ 4 ನಾಮಪತಗಳನ್ನು ಸಲ್ಲಿಸಲು ಅವಕಾಶವಿದೆ. ಈ ವಿಧಾನಸಭಾ ಕ್ಷೇತ್ರವು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮೀಸಲಿಟ್ಟ ಕ್ಷೇತ್ರವಾಗಿರುತ್ತದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಕರ್ನಾಟಕದ ಯಾವುದಾದರೂ ಒಂದು ವಿಧಾನಸಭಾ ಕ್ಷೇತ್ರದ ಮತದಾರರಾಗಿರಬೇಕು. ನಾಮಪತ್ರದೊಂದಿಗೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಾಗಿರುವ ಬಗ್ಗೆ ಸಂಬಂಧಿಸಿದ ಮತದಾರರ ನೊಂದಣಾಧಿಕಾರಿ ಅಥವಾ ಸಹಾಯಕ ಮತದಾರರ ನೊಂದಣಾಧಿಕಾರಿಯಿಂದ ಪಡೆದ ಮತದಾರರ ಪಟ್ಟಿಯ ದೃಢೀಕೃತ ಪಟ್ಟಿಯನ್ನು ಹಾಜರುಪಡಿಸಬೇಕು. ಈ ವಿಧಾನಸಭಾ ಕ್ಷೇತ್ರದ ಪ್ರಸಕ್ತ ಮತದಾರರು ಸೂಚಕರಾಗಿ ನಾಮಪತ್ರದಲ್ಲಿ ಸಹಿ ಮಾಡಿರಬೇಕು. ಅಭ್ಯರ್ಥಿಯು ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ಪಕ್ಷದ ಮೂಲಕ ಸ್ಪರ್ಧಿಸಿದರೆ ಒಬ್ಬ ಸೂಚಕರು, ಅಭ್ಯರ್ಥಿಯು ನೋಂದಾಯಿತ ಮನ್ನಣೆ ಪಡೆಯದ ರಾಜಕೀಯ ಪಕ್ಷಗಳ ಮೂಲಕ ಸ್ಪರ್ಧಿಸಿದರೆ ಅಥವಾ ಪಕ್ಷೇತರ ಅಭ್ಯರ್ಥಿಯಾಗಿದ್ದರೆ ಈ ಚುನಾವಣೆ ಕ್ಷೇತ್ರದ 10 ಮಂದಿ ಮತದಾರರಿಂದ ನಾಮಪತ್ರಗಳಲ್ಲಿ ಸಹಿ ಪಡೆದಿರಬೇಕು.
ಅಭ್ಯರ್ಥಿಗಳು ರೂ.5 ಸಾವಿರಗಳನ್ನು ಠೇವಣಿಯನ್ನಾಗಿ ಪಾವತಿಸಬೇಕು. ಚುನಾವಣಾಧಿಕಾರಿಯವರ ಕಚೇರಿಗೆ 100 ಮೀಟರ್ ಸುತ್ತ-ಮುತ್ತ ವ್ಯಾಪ್ತಿಯಲ್ಲಿ ಅಭ್ಯರ್ಥಿ ಹಾಗೂ ಅವರೊಡನೆ ಬರುವ ವ್ಯಕ್ತಿಗಳಿಗಾಗಿ ಗರಿಷ್ಠ 3 ವಾಹನಗಳಿಗೆ ಮಾತ್ರ ಅವಕಾಶವಿರುತ್ತದೆ. ಸದರಿ ವಾಹನಗಳ ಪರವಾನಿಗೆಯನ್ನು ಚುನಾವಣಾಧಿಕಾರಿಗಳಿಂದ ಪಡೆಯಬೇಕು. ಚುನಾವಣಾಧಿಕಾರಿಯವರ ಕಚೇರಿಯಲ್ಲಿ ಸಿ.ಸಿ ಟಿವಿ ಅಳವಡಿಸಲಾಗುವುದು ಹಾಗೂ ನಾಮಪತ್ರ ಸ್ವೀಕೃತಿ ಪ್ರಕ್ರಿಯೆಗಳನ್ನು ವಿಡಿಯೋಗ್ರಫಿ ಮಾಡಲು ಕ್ರಮವಹಿಸಲಾಗುವುದು. ಅಭ್ಯರ್ಥಿ ಸೇರಿ ಐದು ಜನರು ನಾಮಪತ್ರ ಸಲ್ಲಿಸುವ ವೇಳೆ ಹಾಜರಿರಬಹುದು ಎಂದು ಅವರು ತಿಳಿಸಿದ್ದಾರೆ.
ಸುವಿಧಾ ತಂತ್ರಾಂಶದಲ್ಲಿ ಅಭ್ಯರ್ಥಿಗಳು ಆನ್‍ಲೈನ್ ಮೂಲಕ ನಾಮಪತ್ರಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಅದರ ಜೊತೆಗೆ ವಿವಿಧ ಚುನಾವಣಾ ಪರವಾನಿಗೆಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಬ್ಬ ಅಭ್ಯರ್ಥಿ ಅಥವಾ ಆತನ ಚುನಾವಣಾ ಏಜೆಂಟ್‍ನು ಆತ ಅಭ್ಯರ್ಥಿಯಾಗಿ ನಾಮನಿರ್ದೇಶಿತನಾದ ದಿನಾಂಕದಿಂದ ಚುನಾವಣಾ ಫಲಿತಾಂಶ ಘೋಷಣೆ ದಿನಾಂಕದವರೆಗೆ ಆತನಿಂದ ಅಥವಾ ಆತನ ಚುನಾವಣಾ ಏಜೆಂಟಿನಿಂದ ಮಾಡಲಾದ ಎಲ್ಲಾ ವೆಚ್ಚಗಳ ಪ್ರತ್ಯೇಕವಾದ ಮತ್ತು ಸರಿಯಾದ ಲೆಕ್ಕವನ್ನು ಆಯೋಗ ನಿಗದಿಪಡಿಸಿದ ರಿಜಿಸ್ಟರ್‍ಗಳಲ್ಲಿ ನಿರ್ವಹಿಸಬೇಕು. ಈ ಚುನಾವಣಾ ವೆಚ್ಚದ ಮೇಲ್ವಿಚಾರಣೆಯನ್ನು ಸುಲಭಗೊಳಿಸುವ ದೃಷ್ಟಿಯಿಂದ ಪ್ರತಿಯೊಬ್ಬ ಅಭ್ಯರ್ಥಿಯು ಚುನಾವಣಾ ವೆಚ್ಚದ ಉದ್ದೇಶಕ್ಕೆ ಏಕಮಾತ್ರವಾಗಿ ಒಂದು ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ಆತ ನಾಮಪತ್ರ ಸಲ್ಲಿಸುವ ದಿನಾಂಕಕ್ಕಿಂತ ಒಂದು ದಿವಸ ಮುಂಚಿತವಾಗಿ ತೆರೆಯಬೇಕು. ಬ್ಯಾಂಕ್ ಖಾತೆ ಸಂಖ್ಯೆಯನ್ನು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಚುನಾವಣಾಧಿಕಾರಿ ಅವರಿಗೆ ಲಿಖಿತ ರೂಪದಲ್ಲಿ ನೀಡಬೇಕು ಎಂದು ಹೇಳಿದ್ದಾರೆ.
ಕ್ರಿಮಿನಲ್ ಪ್ರಕರಣಗಳಿರುವ ಅಭ್ಯರ್ಥಿಗಳು ಅದಕ್ಕೆ ಸಂಬಂಧಿಸಿದ ವಿವರಗಳನ್ನು ಭಾರತ ಆಯೋಗ ನಿರ್ದೇಶಿಸಿರುವ ರೀತ್ಯಾ ಟಿವಿ, ದಿನಪತ್ರಿಕೆಗಳಲ್ಲಿ ವಿಸ್ತೃತ ಪ್ರಚುರಾತಿಗಾಗಿ ಪ್ರಕಟಿಸಬೇಕು. ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಯು ಸಕ್ಷಮ ಪ್ರಾಧಿಕಾರಿಯವರಿಂದ ಪಡೆದ ಜಾತಿ ದೃಢೀಕರಣ ಪತ್ರವನ್ನು ನಾಮಪತ್ರದೊಂದಿಗೆ ಲಗತ್ತಿಸಬೇಕು. ಸ್ಪರ್ಧಿಸುವ ಅಭ್ಯರ್ಥಿಗಳು ನಿಗದಿತ ಫಾರಂ-26 ರಲ್ಲಿ ಕ್ರಿಮಿನಲ್ ಮೊಕದ್ದಮೆಗಳು, ಆಸ್ತಿ ವಿವರಗಳು, ವಿದ್ಯಾರ್ಹತೆ ಇತ್ಯಾದಿ ಮಾಹಿತಿಗಳ ಅಫಿಡೆವಿಟ್‍ಗಳನ್ನು ಪಬ್ಲಿಕ್ ನೋಟರಿಯಿಂದ ಪ್ರಮಾಣೀಕರಿಸಿ ಸಲ್ಲಿಸಬೇಕು.
ನಾಮಪತ್ರಗಳನ್ನು ಸಲ್ಲಿಸುವ ಅಭ್ಯರ್ಥಿ ಸೇರಿದಂತೆ ಒಟ್ಟು 5 ಜನರಿಗೆ ಮಾತ್ರ ಚುನಾವಣಾಧಿಕಾರಿಯವರ ಕಚೇರಿಗೆ ಪ್ರವೇಶಾವಕಾಶವಿರುತ್ತದೆ. ಅದೇರೀತಿ ನಾಮಪತ್ರಗಳನ್ನು ಸಲ್ಲಿಸಿದ ನಂತರ ಅಭ್ಯರ್ಥಿಯು ಚುನಾವಣಾಧಿಕಾರಿಯವರ ಮುಂದೆ ಗೊತ್ತುಪಡಿಸಿದ ನಮೂನೆಯನ್ನು ಪ್ರಮಾಣವಚನ ಅಥವಾ ದೃಢೀಕರಣವನ್ನು ಮಾಡಬೇಕು ಎಂದು ಅವರು ತಿಳಿಸಿದ್ದಾರೆ.